ಶಿವಮೊಗ್ಗ : ಹಲವು ದಶಕಗಳಿಂದ ದ್ವೀಪದಂತಾಗಿದ್ದ ಶರಾವತಿ ಮುಳುಗಡೆ ಪ್ರದೇಶದ ಗ್ರಾಮಗಳ ಜನರ ಬಹುದಿನದ ಕನಸಾಗಿದ್ದ ಹಸಿರುಮಕ್ಕಿ ಸೇತುವೆ ಕಾಮಗಾರಿ ಅಂತಿಮ ಹಂತ ತಲುಪಿದೆ. ಸೇತುವೆ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದ್ದು, ಈ ಭಾಗದ ಜನರ ಸಂಚಾರದ ಸಂಕಷ್ಟಕ್ಕೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
ಹೊಸನಗರ ತಾಲೂಕಿನ ನಿಟ್ಟೂರು, ಸಂಪೆಕಟ್ಟೆ, ಎಸ್.ಎಸ್. ಬೋಗ್ ಗ್ರಾಮ ಪಂಚಾಯಿತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹಲವು ವರ್ಷಗಳಿಂದ ತುರ್ತು ಸಂದರ್ಭಗಳಲ್ಲಿಯೂ ಮರುದಿನದವರೆಗೆ ಕಾಯಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಸೇತುವೆ ಪೂರ್ಣಗೊಂಡ ಬಳಿಕ ಈ ಸಮಸ್ಯೆಗೆ ಅಂತ್ಯ ಬೀಳಲಿದೆ.
2017ರಲ್ಲಿ ಆಗಿನ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕನಸಿನ ಯೋಜನೆಯಾಗಿ ಈ ಕಾಮಗಾರಿಗೆ ಚಾಲನೆ ದೊರೆತಿತ್ತು. ಸುಮಾರು ₹125 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸೇತುವೆ 1 ಕಿಲೋಮೀಟರ್‌ಗಿಂತ ಹೆಚ್ಚು ಉದ್ದ, 8.5 ಮೀಟರ್ ಅಗಲದ ದ್ವಿಪಥ ರಸ್ತೆ ಹಾಗೂ 34 ಬೃಹತ್ ಪಿಲ್ಲರ್‌ಗಳ ಮೇಲೆ ನಿರ್ಮಾಣವಾಗುತ್ತಿದೆ.
ಪ್ರಸ್ತುತ ಕಾಮಗಾರಿ ಸುಮಾರು 80 ಶೇಕಡಾ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ದ್ವಿಚಕ್ರ ಹಾಗೂ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ. ಸೇತುವೆ ಆರಂಭವಾದ ಬಳಿಕ ಸಾಗರ, ಹೊಸನಗರ, ಕೊಲ್ಲೂರು ಹಾಗೂ ಕುಂದಾಪುರ ಭಾಗಗಳ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.
ಹಲವು ದಶಕಗಳಿಂದ ಕೇವಲ ಭರವಸೆಯಾಗಿದ್ದ ಈ ಯೋಜನೆ ಇದೀಗ ಸಾಕಾರಗೊಳ್ಳುವ ಹಂತ ತಲುಪಿರುವುದು ಶರಾವತಿ ಸಂತ್ರಸ್ತರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ.


