ಶಿವಮೊಗ್ಗ : ತಂಗಿಯನ್ನು ಪ್ರೀತಿಸಿದಕ್ಕೆ ಪ್ರಿಯಕರನನ್ನು ಕೈ ಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಹತ್ಯೆಮಾಡಿದ ಘಟನೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ ಮಾರ್ಚ್ 15 ರಂದು ನಡೆದಿದೆ.
ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಮೃತ ದುರ್ದೈವಿ.
ಮಾರ್ಚ್ 15 ರಂದು ಮಿಸ್ಸಿಂಗ್ ಆಗಿದ್ದ ವೀರೇಶ್, ಈ ಬಗ್ಗೆ ವೀರೇಶ್ ತಾಯಿ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಇನ್ನೋವಾ ಕಾರಿನ ಡಿಕ್ಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಪೊಲೀಸರು ಇದೊಂದು ಪ್ರೇಮ ಪ್ರಕರಣ ಎಂದು ತಿಳಿದುಬಂದಿದೆ.
ಶಿಕಾರಿಪುರದ ಸಂಬಂಧಿ ಯುವತಿ ಅಂಕಿತಾಳನ್ನು ಗಾಡಿಕೊಪ್ಪದ ಮೃತಪಟ್ಟ ನಿವಾಸಿ ವೀರೇಶ್, ಪ್ರೀತಿಸುತ್ತಿದ್ದ. ವೀರೇಶ್ ಹಾಗೂ ಅಂಕಿತಾಳ ಮದುವೆಗೆ ಸಹೋದರ ಪ್ರವೀಣ್ಗೆ ಇಷ್ಟವಿರಲಿಲ್ಲ. ಹೀಗಾಗಿ ಆತನನ್ನು ಮುಗಿಸಿಬಿಡುವ ಪ್ಲ್ಯಾನ್ ಮಾಡಿಕೊಂಡಿದ್ದ.ಆಕೆಯೊಟ್ಟಿಗೆ ಇದ್ದ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡು. ಅವಳಿನ್ನು ಕಾಲೇಜು ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಅವುಗಳನ್ನು ಹಾಕಿದರೆ ಕಾಲೇಜಿನಲ್ಲಿ ಆಕೆ ಮಾರ್ಯಾದೆ ಹೋಗುತ್ತದೆ ಎಂದಿದ್ದ. ಮದುವೆ ಮಾಡಿಸುವ ಭರವಸೆ ಕೊಟ್ಟಿದ್ದರಿಂದ ವೀರೇಶ್ ಫೋಟೊ ಡಿಲೀಟ್ ಮಾಡಿದ್ದ .ಶುಕ್ರವಾರದಂದು ಗಾಡಿಕೊಪ್ಪದಲ್ಲಿರುವ ವೀರೇಶ್ ಮನೆಗೆ ಪ್ರವೀಣ್ ಬಂದು ನನ್ನ ತಂಗಿ ಅಂಕಿತಾಳನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದು ಹೇಳಿದ್ದ.ಇದನ್ನು ನಂಬಿದ್ದ ವೀರೇಶ್ ಖುಷಿಯಲ್ಲಿದ್ದ ಆ ದಿನವೇ ತಡರಾತ್ರಿ ವೀರೇಶ್ಗೆ ಫೋನ್ ಮಾಡಿದ ಪ್ರವೀಣ್, ಅಂಕಿತ ಅಳುತ್ತಿದ್ದಾಳೆ, ಮನೆಗೆ ಬಾ ನಿನ್ನ ನೋಡಬೇಕು ಅಂತಿದ್ದಾಳೆ ಎಂದು ಕರೆಸಿಕೊಂಡಿದ್ದ. ತನ್ನ ಸ್ನೇಹಿತನ ಇನ್ನೋವಾ ಕಾರನ್ನು ತೆಗೆದುಕೊಂಡು ಬಂದಿದ್ದ. ಆದರೆ ಇಲ್ಲಿ ಪ್ರೇಯಸಿಯ ಅಣ್ಣ ವೀರೇಶನಿಗೆ ಗುಂಡಿ ತೊಡಲು ತಯಾರಿಯಲ್ಲಿದ್ದ.
ತನಿಖೆ ನಡೆಸಿದ ಪೊಲೀಸರು ಪ್ರೇಯಸಿಯ ಅಣ್ಣ ಪ್ರವೀಣ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.ವಿಚಾರಣೆ ವೇಳೆ ಮನೆಯವರೇ ವೀರೇಶ್ನನ್ನು ಪುಸಲಾಯಿಸಿ ಕರೆಸಿಕೊಂಡು ಮನಬಂದಂತೆ ಥಳಿಸಿ, ನಂತರ ಡಿಕ್ಕಿಯೊಳಗೆ ಕೂಡಿಹಾಕಿ ಕಾರು ಸಮೇತ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.