ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ KSRTC ಬಸ್ವೊಂದು ಕಡಿದಾದ ತಿರುವಿನಲ್ಲಿ ಮುಂದಕ್ಕೆ ಚಲಿಸಲಾಗದೆ ನಿಂತಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆರನೇ ತಿರುವಿನಲ್ಲಿ ಬಸ್ ನಿಂತ ಪರಿಣಾಮ ಸಂಭಾವ್ಯ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ ಎಂದು ತಿಳಿದುಬಂದಿದೆ.
ಆಗುಂಬೆ ಘಾಟಿಯ ಆರನೇ ತಿರುವಿನಲ್ಲಿ ಬಸ್ ಏಕಾಏಕಿ ನಿಂತಿದ್ದು, ಕಡಿದಾದ ಏರು ರಸ್ತೆಯಲ್ಲಿ ಮುಂದಕ್ಕೆ ಚಲಿಸಲು ಸಾಧ್ಯವಾಗದೆ ಚಾಲಕ ಹರಸಾಹಸ ಪಟ್ಟಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಬಸ್ ಮೇಲಕ್ಕೆ ಚಲಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾದರು.
ಚಾಲಕನಿಗೆ ಘಾಟಿ ರಸ್ತೆಯಲ್ಲಿ ವಾಹನ ಚಲಾಯಿಸುವ ಅನುಭವದ ಕೊರತೆ ಇದಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಘಟನೆಗೆ ನಿಖರ ಕಾರಣವೇನು ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.
ಕೊನೆಗೆ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಬಳಿಕ ಚಾಲಕ ಬಸ್ ಚಲಾಯಿಸಲು ಮುಂದಾದರು ಎನ್ನಲಾಗಿದೆ. ಬಸ್ ರಸ್ತೆಯಲ್ಲಿ ನಿಂತಿದ್ದರಿಂದ ಘಾಟಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿ ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ಘಾಟಿಯ ಕಡಿದಾದ ತಿರುವಿನಲ್ಲಿ ಬಸ್ ಸಿಲುಕಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಪ್ರವಾಸಿಗರು ನಿಟ್ಟುಸಿರು ಬಿಟ್ಟರು.

