ವಿಜಯನಗರ : ಟಿಬಿ ಡ್ಯಾಂ ಸಮೀಪ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳಾದ ಕೆಂಚಪ್ಪ (35), ಮಹಾಂತೇಶ್ (18), ಭರತ್ (1), ಸವಿತಾ (12), ಮಾರೇಶ್ ಹಾಗೂ ಗೌರಮ್ಮ ಮೃತರು ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ದುರಂತದ ಬಳಿಕ ಹೊಸಪೇಟೆ ಸರ್ಕಾರಿ ಆಸ್ಪತ್ರೆ ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಹೆಂಡತಿ ಮತ್ತು ಮಗನನ್ನು ಕಳೆದುಕೊಂಡ ಮಲ್ಲೇಶ್ ಹಾಗೂ ಅವರ ಮಗ ಒಬ್ಬರನ್ನೊಬ್ಬರು ತಬ್ಬಿಕೊಂಡು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಘಟನೆ ಕುರಿತು ಮಾಹಿತಿ ಪಡೆದ ಕೊಪ್ಪಳ ಎಸ್ಪಿ ಎಲ್. ಅರಸಿದ್ದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.


