Sunday, October 25, 2026
Homeರಾಜ್ಯರಾಯಚೂರು : ವೈದ್ಯಕೀಯ ಲೋಕಕ್ಕೆ ಅಚ್ಚರಿ! ಎರಡು ತಿಂಗಳ ಹಸುಗೂಸಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ..!

ರಾಯಚೂರು : ವೈದ್ಯಕೀಯ ಲೋಕಕ್ಕೆ ಅಚ್ಚರಿ! ಎರಡು ತಿಂಗಳ ಹಸುಗೂಸಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ..!

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸುವ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇವಲ ಎರಡು ತಿಂಗಳ ಹಸುಗೂಸಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದ್ದು, ವೈದ್ಯರು ಈ ಅಸಹಜ ಬೆಳವಣಿಗೆಯನ್ನು ಗುರುತಿಸಿದ್ದಾರೆ. ಗದಗ ಜಿಲ್ಲೆಯ ದಂಪತಿಯ ಎರಡು ತಿಂಗಳ ಮಗುವಿನಲ್ಲಿ ಈ ಅಪರೂಪದ ವೈದ್ಯಕೀಯ ಸಮಸ್ಯೆ ಕಂಡುಬಂದಿದೆ. ಸಿಂಧನೂರಿನ ಸಹನಾ ಆಸ್ಪತ್ರೆಯ ವೈದ್ಯರಾದ ಡಾ. ಶಿವರಾಜ ಪಾಟೀಲ್ ಅವರು ಮಗುವನ್ನು ಪರೀಕ್ಷಿಸಿದ ವೇಳೆ ಹೊಟ್ಟೆಯೊಳಗೆ ಭ್ರೂಣದಂತಹ ರಚನೆ ಇರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ವೈದ್ಯಕೀಯ ಪರಿಭಾಷೆಯಲ್ಲಿ ‘ಫೀಟಸ್ ಇನ್ ಫೀಟು’!
ವೈದ್ಯಕೀಯ ಪರಿಭಾಷೆಯಲ್ಲಿ ಈ ಅಪರೂಪದ ಸ್ಥಿತಿಯನ್ನು ‘ಫೀಟಸ್ ಇನ್ ಫೀಟು’ (Fetus in Fetu) ಎಂದು ಕರೆಯಲಾಗುತ್ತದೆ. ಇದು ಭ್ರೂಣದ ಬೆಳವಣಿಗೆಯ ಸಂದರ್ಭದಲ್ಲಿ ಉಂಟಾಗುವ ಅತ್ಯಂತ ಅಪರೂಪದ ಜನ್ಮಜಾತ ಸಮಸ್ಯೆಯಾಗಿದ್ದು, ಒಂದು ಮಗುವಿನ ದೇಹದೊಳಗೆ ಮತ್ತೊಂದು ಅಪೂರ್ಣವಾಗಿ ಬೆಳೆದ ಭ್ರೂಣದಂತಹ ರಚನೆ ಕಂಡುಬರುತ್ತದೆ.

ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆ ಹಾಗೂ ತಜ್ಞ ವೈದ್ಯರ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕವಷ್ಟೇ ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಮೂರನೇ ಪ್ರಕರಣ ಎಂದು ವೈದ್ಯರ ಮಾಹಿತಿ!.

ಕರ್ನಾಟಕದಲ್ಲಿ ಈ ರೀತಿಯ ಅಪರೂಪದ ವೈದ್ಯಕೀಯ ಸಮಸ್ಯೆ ಪತ್ತೆಯಾಗಿರುವುದು ಮೂರನೇ ಬಾರಿ ಎಂದು ಸಹನಾ ಆಸ್ಪತ್ರೆಯ ಡಾ. ಶಿವರಾಜ ಪಾಟೀಲ್ ಮಾಹಿತಿ ನೀಡಿದ್ದಾರೆ. ಸದ್ಯ ಮಗುವಿನ ಮುಂದಿನ ಚಿಕಿತ್ಸೆ ಹಾಗೂ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯಕೀಯ ತಂಡ ನಿಗಾ ವಹಿಸಿದ್ದು, ಶಸ್ತ್ರಚಿಕಿತ್ಸೆಯ ಫಲಿತಾಂಶದ ಬಳಿಕ ಹೆಚ್ಚಿನ ವಿವರಗಳು ತಿಳಿದುಬರಲಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular