ಯಾದಗಿರಿ : ರಾಜಕೀಯ ಪ್ರಭಾವ,ಶಾಸಕನ ಧನದಾಹ,ವರ್ಗಾವಣೆ ದಂಧೆಗೆ ಪಿಎಸ್ಐ ಪರಶುರಾಮ್ ಬಲಿಯಾಗಿದ್ದಾರೆ. ಸರಕಾರಿ ದಂದೆ ಇದ್ದದ್ದೇ ಒಂದು ವರ್ಗಾವಣೆಗೆ ಕಡಿಮೆ ಅಂದರೆ 30 ಲಕ್ಷ ತೆಗೆಯೋದು ಎಲ್ಲರಿಗೂ ತಿಳಿದ ವಿಚಾರ. ದಕ್ಷ ಪೊಲೀಸ್ ಅಧಿಕಾರಿ ಪರಶುರಾಮ್ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನಗಳ ನಡುವೆ ನಡೆದಿದೆ. ಪಿಎಸ್ಐ ಸಾವಿನ ಹಿಂದೆ ಅನುಮಾನಗಳ ಹುತ್ತ ಬೆಳೆದಿದ್ದು ಸಚಿವ ಶಿವರಾಜ ತಂಗಡಗಿ ಎದುರು ಕುಟುಂಬ ನ್ಯಾಯಕ್ಕಾಗಿ ಕಣ್ಣೀರಿಟ್ಟಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.
ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದ ಶಾಸಕನೊಬ್ಬನ ಧನದಾಹಕ್ಕೆ ಪಿಎಸ್‌ಐ ಪರಶುರಾಮ್ ಬಲಿಯಾಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಪರಶುರಾಮ್ ಅವರ ಪತ್ನಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಆತನ ಪುತ್ರ ಪಂಪನಗೌಡ ವಿರುದ್ಧ ನೇರ ಅರೋಪ ಮಾಡಿದ್ದಾರೆ.
ಎಫ್‌ಐಆರ್ ದಾಖಲು ಮಾಡಲು ಬರೋಬ್ಬರಿ 18 ಗಂಟೆ ತೆಗೆದುಕೊಳ್ಳಲಾಗಿತ್ತು. ಶಾಸಕ ಪಾಟೀಲ್ ಎ1 ಹಾಗೂ ಅವರ ಪುತ್ರ ಎ2 ಆರೋಪಿಯಾಗಿದ್ದಾರೆ. ಯಾದಗಿರಿ ಠಾಣೆಯಲ್ಲಿಯೇ ಪಿಎಸ್‌ಐ ಆಗಿ ಉಳಿದುಕೊಳ್ಳಲು 30 ಲಕ್ಷ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಇನ್ನು ಸೈಬರ್ ಠಾಣೆ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 17 ಗಂಟೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ಅವರು ನೀಡಿದ ದೂರನ್ನು ಆಧರಿಸಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ವಿರುದ್ಧ ಜಾತಿ ನಿಂದನೆ ಆರೋಪದಡಿ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಎಚ್ಚೆತ್ತ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದೆ.
ಇನ್ನು ಈ ಘಟನೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಮಾತನಾಡಿದ್ದ ಬಿಜೆಪಿ ಮಾಜಿ ಶಾಸಕ ರಾಜುಗೌಡ, ‘ಇದು ಆತ್ಮಹತ್ಯೆ ಅಲ್ಲ, ಹತ್ಯೆ ಎಂದು ಆರೋಪಿಸಿದ್ದರು. ಪಿಎಸ್ಐ ಆತ್ಮಹತ್ಯೆ ಹಿಂದೆ ಸ್ಥಳೀಯ ಶಾಸಕರು ಮತ್ತು ಅವರ ಪುತ್ರ ಇದ್ದಾರೆ. ಮೃತ ಪರಶುರಾಮ್ರಿಂದ 30 ಲಕ್ಷ ಪಡೆದಿದ್ದಾರೆ ಎನ್ನುತ್ತಿದ್ದಾರೆ. ಕೂಡಲೇ ಯಾದಗಿರಿ ಶಾಸಕ, ಅವರ ಪುತ್ರನನ್ನು ಬಂಧಿಸಬೇಕು. ಅವರನ್ನು ಬಂಧಿಸದಿದ್ರೆ ಯಾದಗಿರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲ, ಯತ್ನಾಳ್, JDS ಶಾಸಕ ಶರಣಗೌಡ ಕಂದಕೂರು ಕೂಡ ತನಿಖೆಗೆ ಆಗ್ರಹಿಸಿದ್ದರು.
👍