ಸುಳ್ಯ:ಮೌಲ್ಯಾಧಾರಿತ ಪತ್ರಿಕೋದ್ಯಮದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದುದರಿಂದ ಬ್ರೇಕಿಂಗ್ ನ್ಯೂಸ್ ಯುಗದಲ್ಲಿ ವಾಸ್ತವ ಸಂಗತಿಯನ್ನು ಮರೆಮಾಚದೆ ಸತ್ಯವನ್ನೇ ನೀಡುವ ಕೆಲಸ ಪತ್ರಕರ್ತರಿಂದ ಆಗಬೇಕಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್ ಹೇಳಿದರು.
ಸುಳ್ಯದ ಅಂಬಟಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಳ್ಯ ಪ್ರೆಸ್ ಕ್ಲಬ್‌ನ ನೂತನ ಕಟ್ಟಡದ ನೆಲ ಅಂತಸ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೆಸ್ ಮೀಟ್ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕೆಗಳಿಗೆ, ಓದುಗರು, ವಾಹಿನಿಗಳಿಗೆ ವೀಕ್ಷಕರ ಸಹಕಾರ ಅತೀ ಅಗತ್ಯ. ಆಡಳಿತವನ್ನು ಎಚ್ಚರಿಸುವ ಕೆಲಸ ಪತ್ರಿಕೆಗಳಿಂದ ನಿರಂತರವಾಗಿ ನಡೆಯಬೇಕು ಎಂದರು.
ಪ್ರೆಸ್ ಕ್ಲಬ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಪತ್ರಕರ್ತರು ನಿಖರ, ನೇರ ವರದಿ ಮಾಡುವ ಮೂಲಕ ಜನರ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು. ಸ್ಪಷ್ಟತೆ, ಉದ್ದೇಶದಲ್ಲಿ ಯಾವುದೇ ಕಾಂಪ್ರಮೈಸ್ ಮಾಡದೇ ನಮ್ಮ ಕೆಲಸದ ಬಗ್ಗೆ ಪ್ರಯತ್ನಿಸಿದಾಗ ಯಶಸ್ಸು ಸಾಧ್ಯ ಎಂದ ಅವರು ಸಮಾಜದ ಅವಶ್ಯಕತೆಗಳ ಬಗ್ಗೆ ಗಮನಹರಿಸಬೇಕು. ಜನರಿಗೆ ಭಯ ಬರುವಂತಹ ವರದಿ ನೀಡಬೇಡಿ ಎಂದು ಸಲಹೆ ನೀಡಿದರು.
ಅತಿಥಿ ಗೃಹ ಉದ್ಘಾಟಿಸಿದ ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ಪತ್ರಕರ್ತರು ಏನು ಬರೆಯಬೇಕು ಎಂದು ಆಲೋಚಿಸದಂತೆ ಏನು ಬರೆಯಬಾರದು ಎಂಬುದನ್ನು ತಿಳಿದಿರಬೇಕು. ಹಿರಿಯ ಪತ್ರಕರ್ತರು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕಿದೆ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಕಾಯುವ ಸೈನಿಕರು ಹೇಗೆ ದೇಶದ ರಕ್ಷಣೆ ಮಾಡುತ್ತಾರೆಯೋ, ಅದೇ ರೀತಿ ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪತ್ರಕರ್ತರೂ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜ ತಿದ್ದುವ, ಸಮಾಜದ ಕೆಡುಕುಗಳನ್ನು ಹೊರಗೆ ಹಾಕುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ, ಮಾಡಲೇಬೇಕಿದೆ ಎಂದು ಹೇಳಿದರು.ಆರ್ಥಿಕತೆ, ಪರಮಾರ್ಥಿಕತೆ ಜತೆಯಾಗಿ ಹೋದಾಗ ಸಮಾಜದ ಉದ್ಧಾರ ಸಾಧ್ಯವಿದೆ ಎಂದರು.
ಸಂಘಟನೆ ಮೂಲಕ ಒಗ್ಗಟ್ಟಾದಾಗ ಇಲ್ಲಿ ನಿರ್ಮಿಸಿದಂತದ ಸುಸಜ್ಜಿತ ಕಟ್ಟಡ ನಿರ್ಮಿಸಲು ಸಾಧ್ಯ ಎಂಬುದನ್ನು ಸುಳ್ಯದ ಪತ್ರಕರ್ತರು ತೋರಿಸಿಕೊಟ್ಟಿದ್ದಾರೆ. ಎಲ್ಲರಲ್ಲೂ ಧರ್ಮ ಇದ್ದಂತೆ ಪತ್ರಕರ್ತರಲ್ಲೂ ಇರುವ ಪತ್ರಿಕಾ ಧರ್ಮದಂತೆ ಅವರು ನಡೆಯಬೇಕು ಎಂದ ಅವರು ಬದುಕು ಸಮರಸದಿಂದ ಕೂಡಿದ್ದಾಗ ಬದುಕು ಬದುಕಾಗಲಿದೆ ಎಂದರು.
ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಾಣಿಜ್ಯ ವಿಭಾಗ ಕಟ್ಟಡ ಉದ್ಘಾಟಿಸಿದರು. ಸುದ್ದಿ ಸಮೂಹ ಸಂಸ್ಥೆಯ ಸಂಪಾದಕ, ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿಸರು. ನಗರ ಪಂಚಾಯತ್ ಅಧ್ಯಕ್ಷ ಪ್ರೆಸ್ ಕ್ಲಬ್ ಜಂಕ್ಷನ್ ನಾಮಫಲಕ ಅನಾವರಣ ಗೊಳಿಸಿದರು. ತಹಶೀಲ್ದಾರ್ ಅನಿತಾ ಲಕ್ಷ್ಮಿ ದಾನಿಗಳ ಫಲಕ ಅನಾವರಣ ಮಾಡಿದರು.
ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ., ಗ್ರೀನ್ ಹೀರೋ ಆಫ್ ಇಂಡಿಯಾದ ಡಾ.ಆರ್.ಕೆ.ನಾಯರ್ ಜಾಲ್ಸೂರು, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತರಾಮ ರೈ ಸವಣೂರು, ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರದ್ವಾಜ್, ಖ್ಯಾತ ಗಾಯಕ ಶಶಿಧರ ಕೋಟೆ,
ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರು ರೆ.ವಿಕ್ಟರ್ ಡಿಸೋಜ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್, ವಾರ್ತಾ ಇಲಾಖೆ ಜಿಲ್ಲಾ ಹಿರಿಯ ಸಹಾಯಕ ನಿರ್ದೇಶಕ ಹೆಚ್.ಜಿ.ರವಿರಾಜ್, ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ಬಿ.ಹರೀಶ್ ರೈ, ಮಾಧ್ಯಮ ಅಕಾಡೆಮಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯಾಧ್ಯಕ್ಷ ಬಿ.ನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾರಾನಾಥ ಗಟ್ಟಿ ಕಾಪಿಕಾಡ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಪ್ರಮುಖರಾದ ಧನಂಜಯ ಅಡ್ಪಂಗಾಯ,ಟಿ.ಎಂ.ಶಾಹೀದ್ ತೆಕ್ಕಿಲ್, ಕೆವಿಜಿ ಶಿಕ್ಷಣ ಸಂಸ್ಥೆಗಳ ಸಿಇಒ ಉಜ್ವಲ್ ಎ.ಜೆ., ಶಂಕರ್ ಪೆರಾಜೆ, ಗುಣವತಿ ಕೊಲ್ಲಂತ್ತಡ್ಕ, ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡ, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ., ಕೆ.ಎಂ.ಮುಸ್ತಫ, ಪಿ.ಎ.ಮಹಮ್ಮದ್, ನ.ಪಂ.ಸದಸ್ಯ ಶೀಲಾ ಅರುಣ್ ಕುರುಂಜಿ, ಸಿಪಿಐಎಂ ಮುಖಂಡ, ರಾಬರ್ಟ್ ಡಿಸೋಜ, ಎಎಪಿ ರಾಷ್ಟ್ರೀಯ ಮಂಡಳಿ ಸದಸ್ಯ ಅಶೋಕ್ ಎಡಮಲೆ, ಅಡ್ಡಂತ್ತಡ್ಕ ದೇರಣ್ಣ ಗೌಡ, ಗಣಪಯ್ಯ ಭಟ್ ವನಶ್ರೀ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ದಯಾನಂದ ಕೊರತ್ತೋಡಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿದರು.
ಪ್ರೆಸ್ ಕ್ಲಬ್ ಖಜಾಂಜಿ ಯಶ್ವಿತ್ ಕಾಳಂಮನೆ ವಂದಿಸಿದರು. ಪ್ರೆಸ್ ಕ್ಲಬ್ ನಿರ್ದೇಶಕ ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ ಕಾರ್ಯಕ್ರಮ;
ಕಾರ್ಯಕ್ರಮ ದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳು, ಸಹಕರಿಸಿದ ಗಣ್ಯರಿಗೆ ಪ್ರೆಸ್ ಕ್ಲಬ್ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಜಯಪ್ರಕಾಶ್ ಕುಕ್ಕೆಟ್ಟಿ ಸಮ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳು ಸಮ್ಮಾನ ನೆರವೇರಿಸಿದರು.