ಮೊಳಕಾಲ್ಮುರು : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಪ್ರದೇಶವು ಇಡೀ ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಕುಖ್ಯಾತಿ ಪಡೆದಿತ್ತು, ಆದರೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ 25 ವರ್ಷದ ಇತಿಹಾಸದಲ್ಲಿಯೇ ಈ ವರ್ಷ ಅತಿ ಹೆಚ್ಚು ದಾಖಲೆ ಪ್ರಮಾಣದ ಮಳೆಯಾಗಿದೆ.
16ನೇ ಶತಮಾನದಲ್ಲಿ ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಅವರು ನಾಯಕನಹಟ್ಟಿ ಹೋಬಳಿಯಲ್ಲಿ ಐದು ಕೆರೆಗಳನ್ನು ನಿರ್ಮಿಸಿದ್ದಾರೆ ಎನ್ನುವ ಪ್ರತೀತಿ ಇದೆ. ಅದರಲ್ಲಿ ಚಿಕ್ಕಕೆರೆಯೂ ಒಂದು. ಈ ಕೆರೆಯ ಬಗ್ಗೆ ಜನರಿಗೆ ಭಕ್ತಿ ಇದೆ. ಕೆರೆಯ ಮುಂಭಾಗದಲ್ಲೇ ತಿಪ್ಪೇರುದ್ರಸ್ವಾಮಿ ಹೊರಮಠವಿದೆ ಹಾಗಾಗಿ ಈ ಜನರು ಈ ಕೆರೆಯನ್ನು ಭಕ್ತಿ ಭಾವದಿಂದ ನೋಡುತ್ತಾರೆ.
ನಾಯಕನಹಟ್ಟಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ, ಕೊಡಿ ಬಿದ್ದ ಚಿಕ್ಕಕೆರೆಯನ್ನು ನೋಡಲು ನಾಯಕನಹಟ್ಟಿ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸುತ್ತಿದ್ದಾರೆ, ಮಕ್ಕಳು ಮಹಿಳೆಯರು ಕೋಡಿಬಿದ್ದ ನೀರಿಗೀಳಿದು ಸಂಭ್ರಮಿಸುತ್ತಿದ್ದಾರೆ.
ಈ ಕೆರೆಯು ಸುತ್ತಲಿನ ಹಲವು ಹಳ್ಳಿಗಳಿಗೆ ಅಂತರ್ಜಲ ಸೆಲೆಯಾಗಿದ್ದು ಕೆರೆ ತುಂಬಿರುವುದರಿಂದ ಇಲ್ಲಿನ ಜನರ ಸಂತಸ ನೂರ್ಮಡಿಯಾಗಿದೆ, ಇನ್ನು ಚಿಕ್ಕ ಕೆರೆ ಕೋಡಿ ಬಿದ್ದ ಪರಿಣಾಮ ಜಗಳೂರು-ದಾವಣಗೆರೆ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತಿದ್ದೂ ವಾಹನ ಸವಾರರು ರಸ್ತೆ ದಾಟಾಲು ಹೈರಾಣದರು.