ಮೈಸೂರು : ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಮಾಡಿ ಕಲಾಪದ ವೇಳೆ ಸಂಸತ್ ಭವನಕ್ಕೆ ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಅಧಿಕಾರಿಗಳು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಸದನದೊಳಗೆ ನುಗ್ಗಿದ ಯುವಕರನ್ನು ಸಾಗರ್ ಹಾಗೂ ಮನೋರಂಜನ್ ಎಂದು ಗುರುತಿಸಲಾಗಿದ್ದು, ಮನೋರಂಜನ್ ಮೈಸೂರು ಮೂಲದವನು ಎಂದು ತಿಳಿದುಬಂದಿದೆ. ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್ ಕುರ್ಚಿಯತ್ತ ಓಡಿ ಹೋಗಿದ್ದಾನೆ . ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ಪೊಲೀಸರು ದೌಡಾಯಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪಿಐ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.ಇಂತಹ ಕೆಲಸ ಮಾಡಿದ ಮಗನನ್ನು ಗಲ್ಲಿಗೇರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮಗನಿಗೆ ಬಿಇ ಸೀಟ್ ಕೊಡಿಸಿದ್ದು ಹೆಚ್.ಡಿ.ದೇವೇಗೌಡರು. ದೆಹಲಿ, ಬೆಂಗಳೂರಿಗೆ ಓಡಾಡುತ್ತಿದ್ದ. ಆದರೆ ಪುತ್ರ ಮನೋರಂಜನ್ ಎಲ್ಲಿಗೆ ಹೋಗಿದ್ದಾನೆಂದು ಗೊತ್ತಿಲ್ಲ. ನಾವು ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ನನ್ನ ಪುತ್ರ ಯಾಕೆ ಈ ರೀತಿ ಮಾಡಿದ್ದಾನೆ ಎಂದು ಗೊತ್ತಿಲ್ಲ.ಸಮಾಜದಲ್ಲಿ ಅನ್ಯಾಯ ಮಾಡಿದ್ದಾನೆ ಅಂದ್ರೆ ಅವನು ನನ್ನ ಮಗನೇ ಅಲ್ಲ ಅವನಿಗೆ ಸರಿಯಾದ ಶಿಕ್ಷೆ ವಿಧಿಸಿ ಎಂದು ಹೇಳಿದ್ದಾರೆ.
ಇನ್ನು ಪ್ರತ್ಯಕ್ಷ ದರ್ಶಿ ನೀಡಿದ ಮಾಹಿತಿ ಪ್ರಕಾರ ಗ್ಯಾಲರಿಯಿಂದ ಏಕಾಏಕಿ ಸದನಕ್ಕೆ ಜಿಗಿದು ಕಲರ್ ಸ್ಪ್ರೇ ಮಾಡಿದ್ದಾನೆ. ಬಲಗಾಲಿನ ಶೂನಿಂದ ತೆಗೆದು ಹಳದಿ ಕಲರ್ ಸ್ಪ್ರೇ ಮಾಡಿದ್ದು, ಆ ವೇಳೆ ಕೆಲ ಸಂಸದರು ಹಿಡಿದಿದ್ದಾರೆ. ನಂತರ ಆರೋಪಿಯನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು ಎಂದಿದ್ದಾರೆ.ಒಬ್ಬರು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಆಪ್ತ ಕಾರ್ಯದರ್ಶಿಯಿಂದ ಪಾಸ್ ಪಡೆದುಕೊಂಡು ಸಂಸತ್ತಿನೊಳಗೆ ಬಂದಿದ್ದರು. ಆದ್ರೆ, ಈ ರೀತಿ ಏಕೆ ಮಾಡಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ. ಬಗ್ಗೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.


