ಮೈಸೂರು : ಎಂಎಲ್ಸಿ ಎಚ್. ವಿಶ್ವನಾಥ್ ವಿರುದ್ಧ ದಾಖಲಾಗಿರುವ ಎಫ್ಐಆರ್ ವಿಚಾರವಾಗಿ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಶ್ವನಾಥ್ ನನಗೆ ಅನ್ಯಾಯ ಮಾಡಿದ್ದಾರೆ. ಅವರು ಸತ್ಯವಂತರಾಗಿದ್ದರೆ ಚಾಮುಂಡೇಶ್ವರಿ ದೇವಸ್ಥಾನ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ” ಎಂದು ಸವಾಲು ಹಾಕಿದರು.
ಈ ಹಿಂದೆ ವಿಶ್ವನಾಥ್ ಸಂಸದರಾಗಿದ್ದ ವೇಳೆ ಎಂ.ಟಿ.ಬಿ ನಾಗರಾಜ್ ಅವರ ಬಳಿ 35 ಲಕ್ಷ ರೂಪಾಯಿ ಕೊಡಿಸಿದ್ದೆ. ಅದರಲ್ಲಿ ನಾನು 12 ಲಕ್ಷ ರೂಪಾಯಿ ಪಡೆದಿದ್ದೆ. ಆ ಸಂದರ್ಭ ವಿಶ್ವನಾಥ್ ಪುತ್ರರೂ ಇದ್ದರು ಎಂದು ಮಹದೇವ್ ಆರೋಪಿಸಿದರು.
“ಹಣಕ್ಕಾಗಿ ನನ್ನ ಆಸ್ತಿಯನ್ನು ಅಡಮಾನ ಇಟ್ಟಿದ್ದೇನೆ. ಇದೀಗ ಬಡ್ಡಿಯೂ ಹೆಚ್ಚಾಗಿದೆ. ನನ್ನ ಆಸ್ತಿ ವಿಚಾರವಾಗಿ ಅಕ್ಕ-ತಂಗಿಯರು ಕೇಸ್ ಹಾಕಿದ್ದಾರೆ. ನಾನು ಹಣ ವಾಪಸ್ ಕೇಳಿದಾಗ ಜಲದರ್ಶಿನಿಯಲ್ಲಿ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು” ಎಂದು ಅವರು ದೂರಿದರು. ಈ ಕುರಿತು ಮೈಸೂರಿನಲ್ಲಿ ಎಫ್ಐಆರ್ ದಾಖಲಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಿದ್ದೇನೆ ಎಂದು ತಿಳಿಸಿದರು.
“ಈ ಪ್ರಕರಣಕ್ಕೂ ಸಿದ್ದರಾಮಯ್ಯ ಅಥವಾ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಯಾವುದೇ ಸಂಬಂಧ ಇಲ್ಲ” ಎಂದು ಸ್ಪಷ್ಟಪಡಿಸಿದರು. “ವಿಶ್ವನಾಥ್ ಅವರು ಎಂ.ಟಿ.ಬಿ ನಾಗರಾಜ್ ಅವರಿಗೆ 35 ಲಕ್ಷ ರೂಪಾಯಿ ಹಾಗೂ ಅದರ ಬಡ್ಡಿ ಸೇರಿ ಹಣ ವಾಪಸ್ ಕೊಡಬೇಕು” ಎಂದು ಮಹದೇವ್ ಆಗ್ರಹಿಸಿದರು.


