ಮೈಸೂರು : ಮೈಸೂರು ನಗರಾಭಿವೃದ್ಧ ಪ್ರಾಧಿಕಾರದಲ್ಲಿನ ತಮ್ಮ ವಿವಿಧ ಕೆಲಸಗಳಿಗೆ ಗ್ರಾಹಕರು ಕಟ್ಟಿರುವ ಹಣ ದುರುಪಯೋಗವಾಗಿರುವ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ಸುಮಾರು 20 ಕೋಟಿಗೂ ಹೆಚ್ಚಿನ ಹಣ ಇಲ್ಲಿ ದುರುಪಯೋಗವಾಗಿರುವುದು ಬಹುತೇಕ ಖಚಿತವಾಗುತ್ತಿದೆ.
ನಿವೇಶಗಳ ಖಾತೆ ಬದಲಾವಣೆ, ಟೈಟಲ್ ಡೀಡ್ ಪಡೆಯುವುದು, ನಕ್ಷೆ ಅನುಮೋದನೆ ಸೇರಿದಂತೆ ಹಲವು ಕೆಲಸಗಳಿಗಾಗಿ ಕಟ್ಟಿಸಿಕೊಂಡಿದ್ದ ಲಕ್ಷಾಂತರ ರೂ.ಗಳನ್ನು ಮುಡಾ ಸಿಬ್ಬಂದಿ ಬ್ಯಾಂಕ್‌ಗೆ ಕಟ್ಟದೆ ನಕಲಿ ಚಲನ್‌ಗಳನ್ನು ನೀಡಿ ಹಣವನ್ನು ತಮ್ಮ ಜೇಬಿಗಿಳಿಸಿದ್ದಾರೆಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ವಿವರಣೆ ನೀಡಿದರು.
ಗ್ರಾಹಕರು ವಿವಿಧ ಸೇವೆ ಪಡೆಯಲು ನೀಡಿದ್ದ ಅಂದಾಜು 20 ಕೋಟಿ ರೂ. ಗೂ ಅಧಿಕ ಹಣವನ್ನು ಮುಡಾದ ಹೊರಗುತ್ತಿಗೆ ನೌಕರರು ಮತ್ತು ಇನ್ನಿತರರು ಶಾಮೀಲಾಗಿ ವಂಚಿಸಿರುವ ಆರೋಪ ಕೇಳಿಬಂದಿದೆ. ಇವರು ಖಾಸಗಿಯಾಗಿ ಆಸ್ತಿ ಸೃಷ್ಟಿಸಿಕೊಂಡಿದ್ದಾರೆಂಬ ದೂರು ಈ ಹಿಂದೆ ಕೇಳಿಬಂದಿತ್ತು.
ಗ್ರಾಹಕರ ಮೇಲೆ ಎಫ್‌ಐಆರ್: ಈ ನಡುವೆ ತನ್ನ ತಪ್ಪು ಮುಚ್ಚಿಟ್ಟುಕೊಳ್ಳಲು ಗ್ರಾಹಕರ ಮೇಲೆಯೇ ಮುಡಾ ಸಿಬ್ಬಂದಿ ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಎಫ್‌ಐಆರ್ ಮಾಡಿಸಿದ್ದಾರೆ. ದೂರು ದಾಖಲಾದ ಬಳಿಕ ಗ್ರಾಹಕರು ಕಂಗಾಲಾಗಿದ್ದು, ಮಾಡದ ತಪ್ಪಿಗೆ ಇವರು ಸಮಸ್ಯೆ ಎದುರಿಸುವಂತಾಗಿದೆ ಎಂದು ಗಂಗಾರಾಜು ಎಫ್‌ಐಆರ್ ಪ್ರತಿ ತೋರಿಸಿ ದೂರಿದರು.
ಪತ್ರಿಕೆಗೆ ಮಾಹಿತಿ ನೀಡಿ, ಬ್ಯಾಂಕ್ ಅಧಿಕಾರಿಗಳು ಸೀಲ್ ನೀಡಿರುವುದು ಹಾಗೂ ಇದನ್ನು ಬಳಸಿಕೊಂಡು ಮುಡಾ ಸಿಬ್ಬಂದಿ ಅಕ್ರಮ ಎಸಗಿರುವುದು ಸ್ಪಷ್ಟವಾಗಿದೆ. ಆದರೂ ಗ್ರಾಹಕರ ವಿರುದ್ಧ ದೂರು ನೀಡಿ ಪ್ರಕರಣದಲ್ಲಿ ಕೈ ತೊಳೆದುಕೊಳ್ಳಲು ಮುಡಾ ಅಧಿಕಾರಿಗಳು ಹವಣಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಮಾಡಿದರು.
ಈ ಅವ್ಯವಹಾರ ಹಲವು ವರ್ಷಗಳ ಕಾಲ ಮುಡಾದಲ್ಲಿ ನಡೆದಿರುವ ಸಾಧ್ಯತೆ ಇದೆ. ಹೀಗಾಗಿ ಇದಕ್ಕಾಗಿಯೇ ಪ್ರತ್ಯೇಕ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.