ಮೈಸೂರು ; ಸರ್ಕಾರ ಮತ್ತು ರಾಜಮನೆತನ ನಡುವೆ ಜಟಾಪಟಿ ಮುಂದುವರಿಡಿದ್ದು ಚಾಮುಂಡಿಬೆಟ್ಟದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಪ್ರಾಧಿಕಾರದ ಸಭೆ ನಡೆಸಿದ್ದಕ್ಕೆ ಕಾನೂನು ಬಾಹಿರ ಎಂದು ಪ್ರಮೋದಾದೇವಿ ಆಕ್ರೋಶ ಹೊರಹಾಕಿದ್ದಾರೆ.
ಮುಡಾ ಹಗರಣ ಸಂಕಷ್ಟದ ನಡುವೆ ಸಿಎಂ ಸಿದ್ದರಾಮಯ್ಯ ಅವರು ನಾಡದೇವತೆ ಚಾಮುಂಡೇಶ್ವರಿಯ ಮೊರೆ ಹೋಗಿದ್ದಾರೆ. ಮೈಸೂರಿಗೆ ಮಂಗಳವಾರ ಭೇಟಿ ನೀಡಿದ ಸಿಎಂ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಚಾಮುಂಡಿಬೆಟ್ಟಕ್ಕೆ ಸಿಎಂ ಭೇಟಿ ಹಿನ್ನೆಲೆ ಬೆಟ್ಟದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ದೇವಾಲಯ ಮುಂಭಾಗ ಯಾರೂ ಓಡಾಡದಂತೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಭದ್ರತೆಗೆಗಾಗಿ ಬೆಟ್ಟದಲ್ಲಿ ಸಾಕಷ್ಟು ಪೊಲೀಸರ ನಿಯೋಜನೆ ಮಾಡಲಾಗಿತ್ತು.23 ದಿನಗಳಲ್ಲಿ ಎರಡನೇ ಬಾರಿಗೆ ಚಾಮುಂಡಿ ದರ್ಶನ ಮಾಡಿದರು. ಈಡುಗಾಯಿ ಒಡೆದು ನಾಡದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಂದೆ ಜೊತೆ ಆಗಮಿಸಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.
ದೇವರ ದರ್ಶನದ ಬಳಿಕ ಬೆಟ್ಟದ ಅಭಿವೃದ್ದಿ ಪ್ರಾಧಿಕಾರ ಸಭೆ ನಡೆಸಲಿದ್ದಾರೆ. ಮೈಸೂರು ರಾಜಮನೆತನದ ವಿರೋಧದ ನಡುವೆಯೂ ಪ್ರಾಧಿಕಾರದ ಸಭೆ ನಡೆಸಲಿದ್ದು ಇದು ಒಡೆಯರ್ ಕುಟುಂಬದ ಕೆಂಗಣ್ಣಿಗೆ ಕಾರಣವಾಗಿದೆ.ಪ್ರಾಧಿಕಾರದ ಸಭೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್, ಗೈರಾಗಲು ನಿರ್ಧರಿಸಿದ್ದಾರೆ. ಸಭೆ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿಯಿಂದ ಪ್ರಮೋದಾದೇವಿಗೆ ಹಾಜರಾಗುವಂತೆ ಮೇಲ್ ಮೂಲಕ ಪತ್ರ ಕಳುಹಿಸಲಾಗಿತ್ತು. ಅದಕ್ಕೆ ಮೇಲ್ ಮೂಲಕವೇ ಪ್ರಾಧಿಕಾರಕ್ಕೆ ಪ್ರತ್ಯುತ್ತರ ನೀಡಿರುವ ಪ್ರಮೋದಾದೇವಿ ಒಡೆಯರ್, ಸಭೆ ಕಾನೂನು ಬಾಹಿರವಾಗಿ ನಡೆಯುತ್ತಿದೆ. ನ್ಯಾಯಾಲಯದ ವಿರುದ್ಧ ಸಭೆ ನಡೆಸುತ್ತಿರುವುದು ಸರಿಯಲ್ಲ. ಕಾನೂನು ಉಲ್ಲಂಘನೆ ಆಗಲಿದೆ. ಸೆಪ್ಟೆಂಬರ್ 5ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹೀಗಿರುವಾಗ ಸಭೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.ಪ್ರಾಧಿಕಾರ ರಚನೆಗೆ ಪ್ರಮೋದಾದೇವಿ ಒಡೆಯರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಚಾಮುಂಡೇಶ್ವರಿ ಬೆಟ್ಟ ನಮ್ಮ ಆಸ್ತಿ ಎಂದು ಆಕ್ರೋಶ ಹೊರಹಾಕಿದ್ದಾರೆ.