ಮೈಸೂರು ; ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ಕೃಷಿ ಭೂಮಿಯಲ್ಲಿ 20 ವರ್ಷದ ಗಂಡು ಆನೆ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಗ್ರಾಮದ ಗೋವಿಂದ ನಾಯ್ಕ ಎಂಬುವವರಿಗೆ ಸೇರಿದ ಜಮೀನು. ಆನೆ ಆಹಾರ ಅರಸಿ ಗ್ರಾಮಕ್ಕೆ ನುಗ್ಗಿತ್ತು ಎನ್ನಲಾಗಿದೆ. ಶನಿವಾರ ಬೆಳಗ್ಗೆ ಜಂಬೂ ಚಲನವಲನವನ್ನು ಗ್ರಾಮಸ್ಥರು ಗಮನಿಸಿದ್ದರು. ಆದರೆ ಜಮೀನಿನಲ್ಲಿ ಯಾವುದೇ ಬೆಳೆಹಾನಿಯಾದ ವರದಿಯಾಗಿಲ್ಲ . ಆದರೆ, ಮಧ್ಯಾಹ್ನ ಗೋವಿಂದ ನಾಯ್ಕ ಜಮೀನಿಗೆ ಹೋದಾಗ ಆನೆಯ ಶವ ಪತ್ತೆಯಾಗಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಯ ಅರಣ್ಯಾಧಿಕಾರಿ ಭರತ್ ಮಾತನಾಡಿ, ಜಂಬೂ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಆನೆಯ ಒಳಾಂಗಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ಗೊತ್ತಾಗಲಿದ್ದು, ಮೂರ್ನಾಲ್ಕು ದಿನ ಬೇಕು ಎಂದು ಭರತ್ ತಿಳಿಸಿದ್ದಾರೆ.


