ಮೈಸೂರು : ಡಿಸೆಂಬರ್‌ನಲ್ಲಿ ವಿವಾಹವಾಗಬೇಕಿದ್ದ ಎಸ್‌ಬಿಐ ಉದ್ಯೋಗಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತ ಯುವತಿಯನ್ನು ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (26) ಎಂದು ಗುರುತಿಸಲಾಗಿದೆ.
ಇತ್ತೀಚೆಗಷ್ಟೇ ಎಸ್‌ಬಿಐ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದ ಅನುಶ್ರೀ, ತರಬೇತಿ ವೇಳೆ ಕೇರಳದ ಇರಿಟ್ಟಿ ಮೂಲದ ಹಾಗೂ ಎರ್ನಾಕುಲಂ ಎಸ್‌ಬಿಐನಲ್ಲಿ ಕೆಲಸ ಮಾಡುತ್ತಿದ್ದ ಅಮಲ್ ಎಂಬ ಯುವಕನ ಪರಿಚಯವಾಗಿತ್ತು. ಪರಿಚಯ ಬಳಿಕ ಪ್ರೀತಿಗೆ ತಿರುಗಿದ್ದು, ಇಬ್ಬರ ವಿವಾಹವೂ ನಿಶ್ಚಯವಾಗಿತ್ತು. ಡಿಸೆಂಬರ್‌ನಲ್ಲಿ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದ ಜೋಡಿ, ಇತ್ತೀಚೆಗೆ ದೂರವಾಣಿ ಮೂಲಕ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ.
ಹುಣಸೂರು ನಗರದ ಸುಬ್ಬಣ್ಣ ಬಡಾವಣೆಯಲ್ಲಿರುವ ಮನೆಯಲ್ಲಿ ಅನುಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ತಿಳಿದ ಬಳಿಕ ಅಮಲ್ ಕೂಡ ಕೇರಳದ ಇರಿಟ್ಟಿಯಲ್ಲಿರುವ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಘಟನೆ ಕುರಿತು ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

