ಮಂಡ್ಯ : ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮರ ಕತ್ತರಿಸುವ ಯಂತ್ರದಿಂದ ಕೊಲೆಗೈದ ಭಯಾನಕ ಘಟನೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ತೋಟದ ಮನೆಯಲ್ಲಿ ನಡೆದಿದ್ದು, ಜಿಲ್ಲೆಯ ಜನತೆ ಬೆಚ್ಚಿಬಿದ್ದಿದೆ.
ನಿನ್ನೆ ಸಂಜೆ 7 ಗಂಟೆಯ ವೇಳೆಗೆ ಮರ ಕತ್ತರಿಸುವ ಯಂತ್ರದೊAದಿಗೆ ಮನೆಗೆ ನುಗ್ಗಿದ ದುಷ್ಕರ್ಮಿ, ಮನೆ ಮಾಲೀಕ ರಮೇಶ್ ಎಂಬುವರ ಪತ್ನಿ ಯಶೋಧಮ್ಮ ಎಂಬವರ ಬಳಿ, “ನಿಮ್ಮ ಮನೆಗೆ ಮರ ಕತ್ತರಿಸುವ ಯಂತ್ರ ಬಂದಿದೆ. ನಿಮ್ಮ ಮನೆಯವರೇ ಆರ್ಡರ್ ಮಾಡಿದ್ದಾರೆ. ತೆಗೆದುಕೊಳ್ಳಿ” ಎಂದಿದ್ದಾನೆ. ಇದಕ್ಕೆ ಯಶೋಧಮ್ಮ, “ನಾವು ಯಾರೂ ಆರ್ಡರ್ ಮಾಡಿಲ್ಲ” ಎಂದಿದ್ದಾರೆ. ತಕ್ಷಣವೇ ಆತ, ಕತ್ತರಿಸುವ ಯಂತ್ರವನ್ನು ಆನ್ ಮಾಡಿ ಯಶೋಧಮ್ಮನ ಕುತ್ತಿಗೆಗೆ ಹಿಡಿದಿದ್ದಾನೆ. ಯಂತ್ರ ಅವರ ಕೆನ್ನೆಗೆ ತಾಗಿ, ಗಾಯಗೊಂಡು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಳಿಕ ಸೀದಾ ಮನೆಯೊಳಗೆ ನುಗ್ಗಿದ ಆರೋಪಿ ಮಲಗಿದ್ದ ರಮೇಶ್ ಅವರನ್ನು ನೋಡಿ ಅವರ ಕುತ್ತಿಗೆಗೂ ಯಂತ್ರ ಹಿಡಿದಿದ್ದಾನೆ. ತಕ್ಷಣ ಎಚ್ಚರಗೊಂಡ ಯಶೋಧಮ್ಮ, ರಮೇಶ್ ಅವರಿದ್ದ ಕೊಠಡಿಯ ಬಾಗಿಲು ಹಾಕಿ ಲಾಕ್ ಮಾಡಿ ಅಕ್ಕಪಕ್ಕದವರನ್ನು ಜೋರಾಗಿ ಕೂಗಿ ಕರೆದಿದ್ದಾರೆ. ಆದರೆ ಅಷ್ಟರಲ್ಲಿ ರಮೇಶ್ ಹತ್ಯೆಯಾಗಿದ್ದರು. ನಂತರ ಸ್ಥಳಕ್ಕೆ ಬಂದಸ್ಥಳೀಯರು ಹಂತಕನನ್ನು ಮನೆಯ ಒಳಗೆ ಕೂಡಿ ಹಾಕಿ, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಒಂಟಿ ಮನೆಯಲ್ಲಿ ನಡೆದ ಭೀಕರ ಹತ್ಯೆಗೆ ಇಡೀ ಮಂಡ್ಯ ಜನ ಬೆಚ್ಚಿ ಬಿದ್ದಿದ್ದಾರೆ.