ಮಂಡ್ಯ : ನಟರೂ ಆಗಿರುವ ಅಭಿಷೇಕ್ ಅವರು ಅಮರ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಏತನ್ಮಧ್ಯೆ, ವಧು ಅವಿವಾ ಬಿಡಪಾ ಜನಪ್ರಿಯ ಫ್ಯಾಷನ್ ಡಿಸೈನರ್ ಮತ್ತು ಮಾಡೆಲ್. ಮದುವೆ ಸಮಾರಂಭದಲ್ಲಿ ಯಶ್, ಮೋಹನ್ ಬಾಬು, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮತ್ತು ಸುಹಾಸಿನಿ ಮಣಿರತ್ನಂ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಜೂನ್ 16ರಂದು ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಬೀಗರ ಊಟಕ್ಕೆ ಮಂಡ್ಯದ ಸ್ವಾಭಿಮಾನಿ ಜನತೆಯನ್ನು ಸುಮಲತಾ ಅಂಬರೀಶ್ ಮುಕ್ತವಾಗಿ ಆಹ್ವಾನಿಸಿದ್ದಾರೆ. ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ ಜೋಡಿಯ ಮದುವೆ ಮುಗಿದು ವಾರ ಕಳೆಯಿತು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ, ಆರತಕ್ಷತೆ ಮಾಡಿಕೊಂಡಿದ್ದ ಈ ಜೋಡಿ, ಇದೀಗ ತಂದೆ ಅಂಬರೀಶ್ ಹುಟ್ಟೂರಿನಲ್ಲಿ ಬೀಗರ ಊಟ ಆಯೋಜಿಸಿದೆ.
ಸುಮಲತಾ ಆಹ್ವಾನ ಹೀಗಿದೆ.
ಮಂಡ್ಯ ಜಿಲ್ಲೆಯ ಆತ್ಮೀಯ ಜನತೆಗೆ ನಿಮ್ಮ ಸುಮಲತಾ ಅಂಬರೀಶ್ ಮಾಡುವ ನಮಸ್ಕಾರಗಳು.
ತಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ನನ್ನ ಮಗನಾದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಯನ್ನು ಮತ್ತು ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನೆರವೇರಿಸಿರುತ್ತೇನೆ.
ಮಂಡ್ಯದ ಸ್ವಾಭಿಮಾನಿ ಜನತೆ ಅಂಬರೀಶ್ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಾತ್ಸಲ್ಯ ಅಭಿಮಾನಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ.
ಅಭಿಷೇಕ್ ಹಾಗೂ ಅವಿವಾ ಮದುವೆಯ ಸಂಭ್ರಮವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಇದೇ ಶುಕ್ರವಾರ, ದಿನಾಂಕ 16/06/2023 ರಂದು ಬೆಳಿಗ್ಗೆ 11:30ರಿಂದ ಬೀಗರ ಔತಣವನ್ನು ಏರ್ಪಡಿಸಲಾಗಿದೆ. ಇದಕ್ಕಾಗಿ ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಮದುವೆ ಕಾರ್ಯಕ್ರಮಗಳು ಮತ್ತು ಇನ್ನಿತರೆ ಕಾರ್ಯದ ಒತ್ತಡದಿಂದ ನಾನು ಖುದ್ದಾಗಿ ಬಂದು ಬೀಗರ ಔತಣಕ್ಕೆ ತಮ್ಮನ್ನು ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವೆಲ್ಲರೂ ಅನ್ಯತಾ ಭಾವಿಸದೆ ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಿ, ವಧು ವರರನ್ನು ಆಶೀರ್ವದಿಸಬೇಕಾಗಿ ಈ ಮೂಲಕ ಕೋರುತ್ತೇನೆ.
ಈ ಸಂದೇಶವನ್ನು ನನ್ನ ವೈಯಕ್ತಿಕ ಆಹ್ವಾನವೆಂದು ಭಾವಿಸಿ, ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಲು ಮತ್ತೊಮ್ಮೆ ಕೋರುತ್ತೇನೆ.
ಅಂಬರೀಶ್ ಅವರ ಕುಟುಂಬಕ್ಕೆ ತಾವು ಇಲ್ಲಿಯವರೆಗೆ ತೋರಿದ ಪ್ರೀತಿ ವಿಶ್ವಾಸ ಮತ್ತು ಆಶೀರ್ವಾದವನ್ನು, ಇನ್ನು ಮುಂದೆಯೂ ಸಹ ನೀಡಲು ತಮ್ಮನ್ನು ಕೋರುತ್ತೇನೆ.


