ಮಂಡ್ಯ : ಪುರೋಹಿತನಿಗೆ ಪಂಗನಾಮ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸುಂದರಿ ಮಾತಿಗೆ ಮರುಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡ ಅರ್ಚಕ ಇದೀಗ ಕಂಗಾಲಾಗಿದ್ದಾನೆ, 60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಯುವತಿ, ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾಳೆ. ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ ವಿಜಯ್ ಕುಮಾರ್ ಹಣ ಕಳೆದುಕೊಂಡಿದ್ದು, ಇದೀಗ ಪೂಜಾರಪ್ಪ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆನ್ಲೈನ್ನಲ್ಲಿ ಯಾವುದಾದರೂ ಸುಂದರಿ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ತನ್ನ ಗೋಳನ್ನು ಹೇಳಿಕೊಂಡು ಗೋಳೋ ಅಂತ ಅಳ್ತಿದ್ದಾಳಾ.? ಪ್ಲೀಸ್ ಸಹಾಯ ಮಾಡಿ ಅಂತಿದ್ದಾಳಾ, ದುಡಕಬೇಡಿ, ಅದು ಫೇಕ್ ಅಕೌಂಟ್ ಆಗಿರಬಹುದು. ನಿಮ್ಮಿಂದ ವಸೂಲಿ ಕಾರ್ಯಕ್ರಮ ಅವಳು ಇಟ್ಟುಕೊಂಡಿರಬಹುದು ಅಥವಾ ಆ ಕಡೆಯಿಂದ ಬರ್ತಿರೋ ಮೆಸೇಜ್ಗಳು ಹುಡುಯಗಿಯದೇ ಅಲ್ಲದಿರಬಹುದು. ಯಾಕಂದ್ರೆ ಫೇಸ್ಬುಕ್ನಲ್ಲಿ ಸುಂದರಿಯ ಕಣ್ಣೀರಿಗೆ ಕರಗಿದ 60 ವರ್ಷದ ಅರ್ಚಕರೊಬ್ಬರು ಬರೋಬ್ಬರಿ ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ವಿಜಯ್ ಕುಮಾರ್ ಬಗ್ಗೆ ತಿಳಿದುಕೊಂಡ ಯುವತಿ, ವಸತಿ, ಆರೋಗ್ಯ ಸಮಸ್ಯೆ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಈ ರೀತಿ ಸುಮಾರು 1 ಲಕ್ಷದ 50 ಸಾವಿರದಷ್ಟು ಹಣವನ್ನು ಸುಂದರಿ ಪಡೆದಿದ್ದಾಳೆ. ಬಣ್ಣ ಬಣ್ಣದ ಮಾತುಗಳಿಂದ ವಿಜಯ್ ಕುಮಾರ್ಗೆ ಬಲೆ ಹಾಕಿದ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ ವಿಜಯ್ ಹಣ ಕಳುಹಿಸಿದ್ದರು. ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಾಯ ಮಾಡಿದ್ದಾರೆ. ಆದರೆ, ಇಂದು, ನಾಳೆ ಎಂದು ಫೇಸ್ಬುಕ್ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ.
ಸುಂದರಿ ಮಾಯವಾದ ಬಳಿಕ ತಾನು ಮೋಸ ಹೋಗಿರುವ ಬಗ್ಗೆ ವಿಜಯ್ ಕುಮಾರ್ಗೆ ಮನವರಿಕೆಯಾಗಿದ್ದು, ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಮಂಡ್ಯದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.
ಅರ್ಚಕನಿಗೆ ಮೋಸ ಮಾಡಿರುವ ಯುವತಿಯ ಫೇಸ್ಬುಕ್ ಪ್ರೊಫೈಲ್ನಲ್ಲಿ ತೆಲಂಗಾಣದ ಸೋಶಿಯಲ್ ಮೀಡಿಯಾ ಸ್ಟಾರ್ ಬರ್ರೆಲಕ್ಕ ಕರ್ನೆ ಶಿರೀಷಾ ಅವರ ಫೋಟೊ ಇದೆ. ಅಲ್ಲದೇ ಆ ಖಾತೆಯಲ್ಲಿ ಇನ್ನೂ ಅನೇಕ ಯುವತಿಯರ ಫೋಟೊಗಳೂ ಇವೆ. ಹೀಗಾಗಿ ಫೇಕ್ ಫೇಸ್ಬುಕ್ ಖಾತೆ ಸೃಷ್ಟಿಸಿ ಅರ್ಚಕನಿಗೆ ಮೋಸ ಮಾಡಿದವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


