ಮಂಗಳೂರು : ಸ್ವಚ್ಚ ಹಾಗೂ ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಮಂಗಳೂರಿಗೆ ಸಿಕ್ಕ ಸ್ಮಾರ್ಟ್ ಸಿಟಿ ಯೋಜನೆ ಇಂದು ಬಹುತೇಕ ಹಳ್ಳಹಿಡಿದಿದೆ. ಇದಕ್ಕೆ ರಾಜಕೀಯ ನಾಯಕರ ಜೊತೆಗೆ ಅಧಿಕಾರಿ ವರ್ಗಗಳು ಪ್ರಮುಖ ಕಾರಣವಾದ್ರೆ ಜನರ ಪಾಲೂ ಕೂಡಾ ಅಷ್ಟೇ ಇದೆ. ನಗರದಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಅಸಮಾಧಾನ ಇದ್ರೂ ತುಟಿಪಿಟಿಕ್ ಅನ್ನದ ಜನರ ನಿರ್ಲಿಪ್ತ ಮನೋಭಾವ ನಗರ ಇಂದು ಇಂತಹ ಸುಸ್ಥಿತಿಗೆ ತಲುಪಿದೆ.


ಕಾಮಗಾರಿಗಳ ಕಥೆ ಹಾಳಾಗಿ ಹೋಗಲಿ ಕನಿಷ್ಟ ಕಸ ಎಲ್ಲಿ ಎಸೆಯಬೇಕು ಎಂಬುದನ್ನೂ ಜನ ಮರೆತಿದ್ದಾರೆ. ಕಸ ಸಂಗ್ರಹಕ್ಕೆ ಪಾಲಿಕೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡ್ತಾ ಇದೆಯಾದ್ರೂ ಅದನ್ನೂ ಸಮರ್ಪಕವಾಗಿ ಜನ ಉಪಯೋಗ ಮಾಡುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ನಗರದ ರಾವ್ ಅ‌್ಯಂಡ್ ರಾವ್ ಸರ್ಕಲ್. ಇಲ್ಲಿ ಪ್ರತಿನಿತ್ಯ ಸಾವಿರಾರು ಜನ ಓಡಾಡ್ತಾರೆಯಾದ್ರೂ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಉಂಟಾಗಿದೆ.
ಇಲ್ಲೇ ಸಹಕಾರಿ ಸೌಧ ಸೇರಿದಂತೆ ಹತ್ತಾರು ಅಂಗಡಿ ಮಳಿಗೆಗಳಿಗೆ ಬರುವ ಜನರು ಇಲ್ಲಿನ ಕಸದ ರಾಶಿಯಿಂದ ಈ ಕಡೆ ಬರುವುದನ್ನೇ ನಿಲ್ಲಿಸುವಂತಾಗಿದೆ. ಇಲ್ಲಿನ ಸಹಕಾರಿ ಸೌಧದ ಬಾಡಿಗೆದಾರರೇ ಇಲ್ಲಿ ಈ ರೀತಿ ಕಸ ಎಸೆದು ಗಲೀಜು ಮಾಡುತ್ತಿದ್ರೂ ಪಾಲಿಕೆ ಅಧಿಕಾರಿಗಳು ಮಾತ್ರ ಜಾಣಕುರುಡು ತೋರಿಸುತ್ತಿದ್ದಾರೆ. ಬೀದಿಬದಿ ವ್ಯಾಪಾರದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಅಂತ ತೆರವು ಮಾಡಿಸೋ ಅಧಿಕಾರಿಗಳಿಗೆ, ತ್ಯಾಜ್ಯ ರಸ್ತೆಯ ಬದಿ ಹಾಕುವುದರಿಂದ ಸಮಸ್ಯೆ ಆಗುತ್ತದೆ ಎಂಬ ಕನಿಷ್ಟ ಜ್ಞಾನ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. ಉಳ್ಳವರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ ಎಂಬ ರೀತಿ ವರ್ತಿಸುವುನ್ನು ಬಿಟ್ಟು ಅಧಿಕಾರಿಗಳು ಈ ತ್ಯಾಜ್ಯ ಎಸೆಯುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.


