ಮಂಗಳೂರು : ಈ ಬಾರಿ ಸುರಿದ ಜಡಿ ಮಳೆಗೆ ಜಿಲ್ಲೆಯಲ್ಲಿ ಅಮಾಯಕ ಜೀವಗಳನ್ನು ಬಲಿತೆಗೆದಿದ್ದು ಏಲ್ಲರಿಗೂ ತಿಳಿದಿರುವ ವಿಚಾರ ಆದರೆ ಜಿಲ್ಲಾಡಳಿತ ಜನರ ಜೀವಕ್ಕೆ ಬೆಲೆಯೇ ಕಟ್ಟುದಿಲ್ಲ ಯಾಕೆಂದರೆ ಇಲ್ಲಿ ಬಲಿಯಾಗುವುದು ಬಡಪಾಯಿಗಳು.ಇಷ್ಟು ಘಟನೆಗಳು ನಡೆದರೂ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತ್ತಿರುವುದು ವಿಪರ್ಯಾಸ. ಹಣ ಕಂಡರೆ ಹೆಣ ಬಾಯಿಬಿಡುವ ಪರಿಸ್ಥಿತಿ ಇದೀಗ ಮಂಗಳೂರಿನಲ್ಲಿ ಉದ್ಭವಿಸಿದೆ.ಬಡಪಾಯಿಗಳ ಜೀವ ಬಲಿಪಡೆಯುವ ಮೊದಲು ಹೆಚ್ಚೆತ್ತರೆ ಮುಂದೆ ನಡೆಯುವ ಘೋರ ದುರಂತವನ್ನು ತಡೆಯಬಹುದು.
ಬಂಟ್ಸ್ ಹಾಸ್ಟೆಲ್ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಕಟ್ಟಡದ ಸಮೀಪದಲ್ಲಿ ಭಂಡಾರಿ ಬಿಲ್ಡರ್ಸ್ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡದಿಂದ ನಮ್ಮ ಸಂಸ್ಥೆಯ ಕಟ್ಟಡಕ್ಕೆ ಆತಂಕ ಎದುರಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘವು ಜಿಲ್ಲಾಧಿಕಾರಿ ಮತ್ತು ಮೇಯರ್ಗೆ ದೂರು ನೀಡಿದೆ.
ಶತಮಾನದ ಹಿಂದೆಯೇ ಇಲ್ಲಿ ಪ್ರಾಕೃತಿಕವಾಗಿ ನೀರು ಹರಿಯುವ ಸಣ್ಣ ತೋಡಿನ ರೂಪದ ಚರಂಡಿ ಇದ್ದು, ಭಂಡಾರಿ ಬಿಲ್ಡಸ್೯ ಸಂಸ್ಥೆ ನಿರ್ಮಾಣ ಮಾಡುವ ಕಟ್ಟಡದಿಂದ ಚರಂಡಿಗೆ ಹಾನಿಯಾಗಿದೆ. ಅಲ್ಲದೆ ಕಟ್ಟಡಕ್ಕಾಗಿ ತುಂಬಾ ಆಳದಲ್ಲಿ ಭೂಮಿಯನ್ನು ಅಗೆಯಲಾಗಿದ್ದು, ಸುರಕ್ಷೆಗಾಗಿ ನಿರ್ಮಿಸುತ್ತಿರುವ ರಿಟೈನಿಂಗ್ ವಾಲ್ ಕಾಮಗಾರಿ ತುಂಬಾ ನಿಧಾನಗತಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ಕಾಮಗಾರಿ ಆರಂಭಿಸುವಾಗ ಭಂಡಾರಿ ಬಿಲ್ಡಸ್೯ ನ ಮುಖ್ಯಸ್ಥರಾದ ಲಕ್ಷ್ಮೀಶ ಭಂಡಾರಿ ಅವರು ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದಾಗಿಯೂ, ರಿಟೈನಿಂಗ್ ವಾಲ್ ಕಾಮಗಾರಿ ಪೂರ್ತಿಯಾಗುವವರೆಗೆ ಪೈಪ್ ಅಳವಡಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದಾಗಿಯೂ ಭರವಸೆ ನೀಡಿದ್ದರು. ರಿಟೈನಿಂಗ್ ವಾಲ್ ಕಾಮಗಾರಿ ಪೂರ್ತಿಯಾದ ಬಳಿಕ ಹಿಂದಿದ್ದ ರೀತಿಯಲ್ಲೇ ಚರಂಡಿ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದ್ದರು. ಆದರೆ ಆ ಬಳಿಕ ಅವರು ಮಾತಿಗೆ ಬದ್ಧರಾಗಿರದ ಕಾರಣ ಈಗ ರಾಮಕೃಷ್ಣ ಶಿಕ್ಷಣ ಸಂಸ್ಥೆಗೆ ಅಪಾಯದ ಆತಂಕ ಎದುರಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈಗ ಮುಂಗಾರು ಬಿರುಸುಗೊಂಡಿದ್ದು, ರಿಟೈನಿಂಗ್ ವಾಲ್ ಕಾಮಗಾರಿ ಪೂರ್ತಿಯಾಗದ ಕಾರಣ ಮಣ್ಣು ಸಡಿಲಗೊಂಡು ಜರಿದು ಬೀಳುವ ಸಾಧ್ಯತೆಯೂ ಇದೆ. ಒಂದೊಮ್ಮೆ ಹೀಗಾದರೆ ಕಾಲೇಜಿನ ಕಟ್ಟಡ ಹಾಗೂ ಅದರಲ್ಲಿರುವ ಸಾವಿರಾರು ವಿದ್ಯಾರ್ಥಿಗಳ ಜೀವ ಅಪಾಯಕ್ಕೆ ಸಿಲುಕಲಿದೆ. ಆದ್ದರಿಂದ ಕೂಡಲೇ ತಾವು ಮಧ್ಯಪ್ರವೇಶಿಸಿ ಭಂಡಾರಿ ಬಿಲ್ಡರ್ಸ್ ಸಂಸ್ಥೆಯಿಂದ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಮತ್ತು ಮೇಯರ್ ಗೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಮೇ ತಿಂಗಳ 27ರಂದು ಈ ಸಂಬಂಧ ಭಂಡಾರಿ ಬಿಲ್ಡರ್ಸ್ನ ಮಾಲಕರಾದ ಲಕ್ಷ್ಮೀಶ ಭಂಡಾರಿಗೆ ಈ ಸಂಬಂಧ ನೋಟಿಸ್ ನೀಡಿ, ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು. ಹಿಂದೆ ನೀಡಿದ್ದ ಮಾತು ಉಳಿಸಿಕೊಳ್ಳುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಅದಕ್ಕೆ ಯಾವುದೇ ಪೂರಕ ಸ್ಪಂದನೆ ಸಿಗದ ಕಾರಣ ಜೂನ್ 27ರಂದು ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಮುಖ್ಯಸ್ಥರಿಗೆ ಬಂಟರ ಸಂಘದ ವತಿಯಿಂದ ದೂರು ನೀಡಲಾಗಿದೆ.
ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ಈಗಾಗಲೇ ನಗರದಲ್ಲಿ ಕಟ್ಟಡ ಕಾಮಗಾರಿ ಸಂದರ್ಭ ಮಣ್ಣು ಕುಸಿದು ಬಿದ್ದು ಓರ್ವ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಘಟನೆ ಸಂಭವಿಸಿದೆ. ಆದ್ದರಿಂದ ಭಂಡಾರಿ ಬಿಲ್ಡರ್ಸ್ ನಿರ್ಲಕ್ಷ್ಯ ವಹಿಸದಂತೆ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕಾಗಿದೆ ಎಂಬ ಆಗ್ರಹ ಎಲ್ಲರಿಂದಲೂ ಕೇಳಿ ಬರುತ್ತಿದೆ.