ಮಂಗಳೂರು : ವೆನ್ಲಾಕ್ ಆಸ್ಪತ್ರೆ ವೈದ್ಯರ ಈ ಸಾಧನೆಯು ನಮ್ಮ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿರುವ ವೃತ್ತಿಪರರ ಕೌಶಲ್ಯ, ಸಮರ್ಪಣೆ ಮತ್ತು ಅಚಲ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚು ದೂಷಿಸಲಾಗುತ್ತದೆ. ಆದರೆ ಈ ಪ್ರಕರಣವು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಗುಣಮಟ್ಟದಲ್ಲಿ ಎಷ್ಟೊಂದು ಸುಧಾರಣೆಗಳು ಆಗುತ್ತಿವೆ ಎಂಬುದಕ್ಕೆ ಇಂಥಹ ಪ್ರಕರಣಗಳೇ ಸಾಕ್ಷಿ. ಅಷ್ಟೇ ಅಲ್ಲದೇ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತುರ್ತು ಸ್ಪಂದನೆ ಹಾಗೂ ಸಮಯೋಚಿತ ನಿರ್ಧಾರವು ನಮ್ಮಲ್ಲಿರುವ ಇತರೆ ಸರ್ಕಾರಿ ಆಸ್ಪತ್ರೆಗಳಿಗೂ ಸ್ಪೂರ್ತಿಯಾಗಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.
ವೆನ್ಲಾಕ್ ಆಸ್ಪತ್ರೆಯನ್ನು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು 90 ಕೋಟಿಗೂ ಅಧಿಕ ಮೊತ್ತ ಹಾಗೂ ಎಂ.ಆರ್.ಪಿ.ಎಲ್ ಸೇರಿದಂತೆ ವಿವಿಧ ಸಿಎಸ್ಆರ್ ನಿಧಿಯಡಿ ಹಂತ-ಹಂತವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ 60 ಕೋಟಿ ಸುಮಾರಿನ ಅನುದಾನದಲ್ಲಿ ನಿರ್ಮಾಣಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೊಂಡಿತ್ತು ಹಾಗೂ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್-PMABHIM ಯೋಜನೆಯಡಿ ದ.ಕ. ಜಿಲ್ಲೆ ಒಟ್ಟು 25.11 ಕೋಟಿ ರೂ. ಬಿಡುಗಡೆಯಾಗಿತ್ತು. ಆ ಪೈಕಿ 24 ಕೋಟಿ ರೂ. ವೆಚ್ಚದಲ್ಲಿ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಟ್ರಮಾ ಕೇರ್ ಸೆಂಟರ್ನ 2ನೇ ಮಹಡಿಯಲ್ಲಿ ಜಿಲ್ಲಾ ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬ್ (IPHL) ಕಟ್ಟಡ ನಿರ್ಮಾಣಕ್ಕೆ 1.11 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಇದರ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಘಟಕಗಳು ಕಾರ್ಯಾರಂಭಿಸಿದರೆ ವೆನ್ಲಾಕ್ನಲ್ಲಿ ಮತ್ತಷ್ಟು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಕರಾವಳಿ ಜನತೆಗೆ ದೊರೆಯಲಿದೆ.
ಇದಲ್ಲದೇ ಕ್ಯಾ.ಚೌಟ ಇತ್ತೀಚೆಗೆ ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕರ ಭೇಟಿ ಮಾಡಿ ವೆನ್ಲಾಕ್ ಗೆ ಸಿಎಸ್ಆರ್ ಫಂಡ್ ನಡಿ ಮತ್ತಷ್ಟು ಅನುದಾನ ನೀಡುವಂತೆ ಮನವಿ ಮಾಡಿದ್ದು ಸರ್ಕಾರಿ ಸಂಸ್ಥೆಗಳ ನಡುವಿನ ಇಂತಹ ಸಹಯೋಗಗಳು ಅತ್ಯಗತ್ಯ. ನಿರಂತರ ಹೂಡಿಕೆ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳೊಂದಿಗೆ, “ಮಂಗಳೂರು” ಆರೋಗ್ಯ ರಕ್ಷಣೆ ಮತ್ತು ಸೇವೆಯಲ್ಲಿ ಮಾದರಿ ನಗರವಾಗಿ ಹೊರಹೊಮ್ಮಬಹುದು, ಇದರಿಂದ ಲಕ್ಷಾಂತರ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದ್ದರು.


