ಮಂಗಳೂರು : ನಿನ್ನೆ ರಾತ್ರಿ ಬಿಜೆಪಿ ವಿಜಯೋತ್ಸವ ವೇಳೆ ಅನ್ಯಕೋಮಿಯ ಗುಂಪೊಂದು ಇಬ್ಬರಿಗೆ ಚಾಕು ಇರಿದಿದ್ದು ಓರ್ವನ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆ ಸಂಬಂಧ ಕೊಣಾಜೆ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದ್ದಾರೆ. ಹರೀಶ್(41), ನಂದಕುಮಾರ್(24)ಗೆ ಚಾಕು ಇರಿಯಲಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತ್ತೋರ್ವ ಕೃಷ್ಣ ಕುಮಾರ್ ಎಂಬಾತನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹಾಗೂ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರ ಚುನಾವಣಾ ಗೆಲುವಿನ ಸಂಭ್ರಮಾಚರಣೆಗಾಗಿ ಬೊಳ್ಳಾರ್ ಬಿಜೆಪಿ ಗ್ರಾಮ ಸಮಿತಿ ಆಯೋಜಿಸಿದ್ದ ವಿಜಯೋತ್ಸವದ ಮೆರವಣಿಗೆಯಲ್ಲಿ ವಾಗ್ವಾದ ನಡೆದಿದೆ. ಮೆರವಣಿಗೆ ಮಾರ್ಗವು ಚೇಳೂರಿನಿಂದ ಬೋಳಿಯಾರ್ ಮೂಲಕ ಧರ್ಮನಗರದವರೆಗೆ ವಿಸ್ತರಿಸಿತು.
ವಿಜಯೋತ್ಸವ ಮುಗಿಸಿ ಬೋಳಿಯಾರು ಪೇಟೆಯಲ್ಲಿ ನಿಂತಿದ್ದ ಸುರೇಶ್, ನಂದ ಕುಮಾರ್ ಹಾಗೂ ಕೃಷ್ಣ ಕುಮಾರ್ ಮೇಲೆ ಅಪರಿಚಿತ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಈ ಗಲಾಟೆಯಲ್ಲಿ ಇಬ್ಬರಿಗೆ ಚಾಕು ಇರಿಯಲಾಗಿದೆ. ಸದ್ಯ ಇಬ್ಬರಿಗೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತ್ತೊಂದೆಡೆ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಇನ್ನೂ ಹಲವರಿಗಾಗಿ ಪೊಲೀಸರು ಬಲೆಬೀಸಿದ್ದಾರೆ.
ಕೊಣಾಜೆ ಠಾಣಾ ವ್ಯಾಪ್ತಿಯ ಬೊಳಿಯಾರ್ ಬಾರ್ನ ಮುಂಭಾಗದಲ್ಲಿ ಚಾಕು ಇರಿತ ನಡೆದಿದೆ. ಮೂವರು ಬಿಜೆಪಿ ಕಾರ್ಯಕರ್ತರು ಬೋಳಿಯಾರ್ ಮಸೀದಿಯ ಮುಂದೆ ಹೋಗುವಾಗ ಬಿಜೆಪಿ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ವೇಳೆ ಬೈಕ್ಗಳಲ್ಲಿ 20-25 ಮುಸ್ಲಿಂ ಯುವಕರ ತಂಡ ಅವರನ್ನು ಹಿಂಬಾಲಿಸಿ ಬಂದು ಬೋಳಿಯಾರ್ ಬಾರ್ ಬಳಿ ವಾಗ್ವಾದ ನಡೆಸಿ ಥಳಿಸಿದ್ದಾರೆ. ಇದರಲ್ಲಿ ಇಬ್ಬರಿಗೆ ಚೂರಿಯಿಂದ ಇರಿಯಲಾಗಿದೆ ಎಂದು ಹೇಳಲಾಗುತ್ತಿದೆ.