Friday, July 24, 2026
Homeಜಿಲ್ಲೆಮಂಗಳೂರು : ಲಕ್ಕಿ ಸ್ಕೀಮ್ ಹೆಸರಲ್ಲಿ ಗೋಲ್ಮಾಲ್ ಆರೋಪ, ಅಸ್ತ್ ಗ್ರೂಪ್ ಕಚೇರಿ ಮುಂದೆ ಹೂಡಿಕೆದಾರರ...

ಮಂಗಳೂರು : ಲಕ್ಕಿ ಸ್ಕೀಮ್ ಹೆಸರಲ್ಲಿ ಗೋಲ್ಮಾಲ್ ಆರೋಪ, ಅಸ್ತ್ ಗ್ರೂಪ್ ಕಚೇರಿ ಮುಂದೆ ಹೂಡಿಕೆದಾರರ ಆಕ್ರೋಶ,ನಾಪತ್ತೆಯಾದ ಲಂಚುಲಾಲ್ ,ಕಟ್ಟಿದ ಹಣ ಸಿಗದೇ ಕಂಗಾಲಾದ ಗ್ರಾಹಕರು.

ಮಂಗಳೂರು : ಮಂಗಳೂರಿನ ನವಭಾರತ್ ಸರ್ಕಲ್ ಸಮೀಪದ ಅಸ್ತ್ರ ಗ್ರೂಪ್ ಕಚೇರಿ ಎದುರು ಶುಕ್ರವಾರ (ಜುಲೈ 24) ಬೆಳಗ್ಗಿನಿಂದಲೇ ನೂರಾರು ಹೂಡಿಕೆದಾರರು ಜಮಾಯಿಸಿ ಹಣ ಪಾವತಿಗೆ ಆಗ್ರಹಿಸಿದರು. ಹಲವು ದಿನಗಳಿಂದ ಹಣ ಸಿಗುತ್ತಿಲ್ಲ ಎಂದು ಆರೋಪಿಸಿದ ಹೂಡಿಕೆದಾರರು, ಸಂಸ್ಥೆಯ ಪ್ರತಿನಿಧಿಗಳು ಹಾಗೂ ಏಜೆಂಟರನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹೂಡಿಕೆದಾರರ ಆರೋಪದ ಪ್ರಕಾರ, ಹಲವು ತಿಂಗಳುಗಳಿಂದ ವಿವಿಧ ಯೋಜನೆಗಳಡಿ ಹೂಡಿಕೆ ಮಾಡಿದ ಹಣ ಮರುಪಾವತಿಯಾಗಿಲ್ಲ. ಸಂಸ್ಥೆಯ ಮುಖ್ಯಸ್ಥರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ವಿವಿಧ ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ಕುರಿತು ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಅಸ್ತ್ರ ಗ್ರೂಪ್ ಕೆಲ ತಿಂಗಳ ಹಿಂದೆ “ಲಕ್ಕಿ ಸ್ಕೀಮ್” ಸೇರಿದಂತೆ ವಿವಿಧ ಹೂಡಿಕೆ ಯೋಜನೆಗಳನ್ನು ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಆರಂಭಿಸಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆದಿತ್ತು ಎನ್ನಲಾಗಿದೆ. ದೊಡ್ಡ ಮೊತ್ತದ ಹೂಡಿಕೆಗೆ ಹೆಚ್ಚಿನ ಲಾಭದ ಭರವಸೆ ನೀಡಲಾಗುತ್ತಿತ್ತು ಎಂದು ಹೂಡಿಕೆದಾರರು ಆರೋಪಿಸಿದ್ದಾರೆ. ಕೆಲವರು ಸಂಸ್ಥೆಯ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿವೆ ಎಂದು ಮಾಹಿತಿ ನೀಡಲಾಗಿತ್ತು ಎಂದು ಹೇಳಿದ್ದು, ಇದರ ಸತ್ಯಾಸತ್ಯತೆ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆಯೇ ಅಥವಾ ತನಿಖೆ ಆರಂಭವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬೆಳವಣಿಗೆ ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿದ್ದು, ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ವಾಸ್ತವಾಂಶ ಬಹಿರಂಗಪಡಿಸಬೇಕೆಂದು ಹೂಡಿಕೆದಾರರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular