ಮಂಗಳೂರು ; ಕ್ಯಾಲಿಕಟ್ನಲ್ಲಿ ನಡೆದ ಪ್ರತಿಷ್ಠಿತ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ ಸೀಸನ್-10 ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿಭಾವಂತ ಪುಟಾಣಿ ಮಕ್ಕಳಾದ ಲೌಕ್ಯ ಎಸ್ ರೈ (6) ಹಾಗೂ ಸಚಿತಾ ರಾವ್ (12) ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಮಂಗಳೂರು–ಬೆಂಗಳೂರು ಮೂಲದ ವಾಯ್ರಾ ಪೇಜಂಟ್ರಿ ಅಂಡ್ ಮಾಡೆಲಿಂಗ್ ಸ್ಕೂಲ್ನ ವಿದ್ಯಾರ್ಥಿನಿಯರಾದ ಇವರು, ತರಬೇತುದಾರ್ತಿ ಯಶಸ್ವಿನಿ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸ್ಪರ್ಧಿಗಳ ನಡುವೆ ವಿವಿಧ ಸುತ್ತುಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ಲೌಕ್ಯ ಎಸ್ ರೈ, 6–8 ವರ್ಷದ ವಿಭಾಗದಲ್ಲಿ “SR TOD JMI India – Girls Category” ಪ್ರಶಸ್ತಿಯನ್ನು ಗೆದ್ದರು. 10–12 ವರ್ಷದ ವಿಭಾಗದಲ್ಲಿ ಸಚಿತಾ ರಾವ್ “Miss Pre Teen JMI India” ಪಟ್ಟವನ್ನು ತನ್ನದಾಗಿಸಿಕೊಂಡರು.
ಇದಲ್ಲದೆ, ಲೌಕ್ಯ ಪ್ರತಿಭಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿ “Extreme Talent Award” ಕೂಡ ಪಡೆದಿದ್ದಾರೆ. ಲೌಕ್ಯ ಎಸ್ ರೈ ಅವರು ಸಚಿನ್ ಮತ್ತು ಸುಷ್ಮಾ ರೈ ದಂಪತಿಯ ಪುತ್ರಿಯಾಗಿದ್ದು, ಸಚಿತಾ ರಾವ್ ಅವರು ಸಚಿನ್ ರಾವ್ ಮತ್ತು ಅಶ್ವಿನ್ ರಾವ್ ದಂಪತಿಯ ಪುತ್ರಿಯಾಗಿದ್ದಾರೆ.
ಈ ಇಬ್ಬರು ಪುಟಾಣಿ ಪ್ರತಿಭೆಗಳು ಇದೀಗ ಆಗಸ್ಟ್ನಲ್ಲಿ ಬ್ಯಾಂಕಾಕ್ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತರಬೇತುದಾರ್ತಿ ಯಶಸ್ವಿನಿ ದೇವಾಡಿಗ, ಸುಷ್ಮಾ ರೈ,ಸಚಿನ್ ರಾವ್ ರವರು ಉಪಸ್ಥಿತರಿದ್ದರು.


