Saturday, March 14, 2026
Flats for sale
Homeಜಿಲ್ಲೆಮಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಖಂಡನೀಯ :...

ಮಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಖಂಡನೀಯ : ಶಾಸಕ ವೇದವ್ಯಾಸ್ ಕಾಮತ್.

ಮಂಗಳೂರು : ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಂದೊಡ್ಡಿದ ಕಾಂಗ್ರೆಸ್ ಆಡಳಿತದ ಪಾಲಿಕೆ – ನಗರ ಭಾಗಕ್ಕೆ ಪೂರೆಕೆಯಾಗುವ ಕುಡಿಯುವ ನೀರಿನ ಕೊಳವೆ ಒಡೆದು ಹೋಗಿ ಮೂರ್ನಾಲು ದಿನಗಳು ಕಳೆದು ಜನಸಾಮಾನ್ಯರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಖಂಡನೀಯ, ನಗರದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ನೀರಿಲ್ಲದ ವಾತಾವರಣ ಸೃಷ್ಟಿಯಾಗಿದ್ದರೂ ವರ್ಯಾಯ ವ್ಯವಸ್ಥೆ ಮಾಡದೇ ಇರುವುದಂತೂ ಈ ಸರ್ಕಾರದ ಬೇಜವಾಬ್ದಾರಿಯ ಪರಮಾವಧಿಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಆಯುಷ್ ನಲಿ ಔಷದ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅಧಿಕಾರಿಗಳು ಹಣದ ಆಸೆಗೆ ಅವದಿ ಮೀರಿದ ಔಷಧ ಪೂರೈಕೆ ಮಾಡಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದು ನನ್ನ ಗಮನಕ್ಕೆ ಬಂದ ಕೂಡಲೇ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಲದೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಆದರೂ ಯಾವುದೇ ಸೂಕ್ತ ಕ್ರಮವಾಗಿರಲಿಲ್ಲ. ಇದೀಗ ಅಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ಆರೋಪಕ್ಕೆ ಪೂರಕವಾಗಿ ಕೆಲವು ದಾಖಲೆಗಳು ಲಭಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಯಾವುದೇ ಒತ್ತಡಕ್ಕೆ ಒಳಗಾಗದೇ ಸೂಕ್ತ ತನಿಖೆ ಮುಂದುವರಿದರೆ ಮತ್ತಷ್ಟು ವಿಷಯಗಳು, ಕಾಣದ ಕೈಗಳು ಹೊರಗೆ ಬರುವ ನಿರೀಕ್ಷೆ ಇದೆ ಎಂದರು/

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರ ಕ್ರಮ ಮಾತ್ರವಲ್ಲ, ಈ ಕೂಡಲೇ ರಾಜ್ಯ ಕಾಂಗ್ರೆಸ್‌ ಸರ್ಕಾರ ಅವರನ್ನು ಆ ಸ್ಥಾನದಿಂದಲೇ ಕಿತ್ತೆಸೆಯಬೇಕು. ಕರಾವಳಿ ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವು ಇಲ್ಲಿನ ಜನರ ಭಕ್ತಿ ಭಾವದಿಂದ ಕೂಡಿದ ಸಂಸ್ಕೃತಿಯ ಭಾಗವಾಗಿದೆ. ಯಕ್ಷಗಾನ ಕಲಾವಿದರನ್ನು ಗೌರವಯುತವಾಗಿ ಕಾಣುವ ಸಮಾಜ ನಮ್ಮದು. ಅಂತಹ ಪರಂಪರೆಗೆ ಎಡಪಂಥೀಯ ಬುದ್ದಿಜೀವಿಗಳು ಅವಮಾನ ಮಾಡುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ನೋವಾಗಿದೆ. ಸದಾ ಕಾಲ ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವವರನ್ನೇ ಹುಡುಕಿ ಪ್ರಮುಖ ಸ್ಥಾನದಲ್ಲಿ ಕೂರಿಸುವ ಕಾಂಗ್ರೆಸ್ಸಿನ ಹೀನ ಚಾಳಿ ಇನ್ನಾದರೂ ಬದಲಾಗಬೇಕು ಎಂದರು.

ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ ಜನವರಿಯಿಂದ ವಾಹನಗಳಿಗೆ ಟೋಲ್ ವಿಧಿಸಲು ಚಿಂತನೆ ನಡೆಸಿರುವುದು ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆಯಾಗಿ ಪರಿಣಮಿಸಲಿದ್ದು ಇದಕ್ಕೆ ನಮ್ಮ ಆಕ್ಷೇಪವಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಇಲ್ಲಿನ ರಸ್ತೆಯ ನಿರ್ವಹಣೆಯ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸಲಾಗಿತ್ತು. ಇದೀಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಲಕ ಆಡಳಿತ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕದ್ರಿ ಪಾರ್ಕ್ ರಸ್ತೆಯ ನಿರ್ವಹಣೆಯ ವ್ಯವಸ್ಥೆಯನ್ನು ಟೆಂಡರ್ ಪಡೆದವರು ಇಲ್ಲಿ ಬರುವ ವಾಹನಗಳಿಗೆ ಟೋಲ್. ಕಡ್ಡಾಯ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಜನಸಾಮಾನ್ಯರು ಬೆಲೆ ಏರಿಕೆ ಯಿಂದ ತತ್ತರಿಸಿ ಹೋಗಿದ್ದಾರೆ. ಇದೀಗ ಈ ವ್ಯವಸ್ಥೆಯೂ ಸಹ ಜಾರಿಗೆ ಬಂದರೆ ಇಲ್ಲಿನ ಜನರು ರೊಚ್ಚಿಗೇಳುವುದು ಗ್ಯಾರಂಟಿ ಎಂದರು.

ಅನೇಕ ವರ್ಷಗಳಿಂದ ಮಹಿಳೆಯರು, ಹಿರಿಯರು, ಸೇರಿದಂತೆ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಬಂದು ಈ ಪಾರ್ಕ್ ನಲ್ಲಿ ವಾಕಿಂಗ್ ಗೆ ಹೋಗುತ್ತಿದ್ದಾರೆ. ಪುಟ್ಟ ಮಕ್ಕಳನ್ನು ಆಟೋಟಕ್ಕೂ ಕರೆದುಕೊಂಡು ಬರುತ್ತಿದ್ದಾರೆ. ಇದೀಗ ಇಂತಹ ಹೊಸ ನಿಯಮಗಳು ಜಾರಿಗೆ ಬಂದರೆ ಅವರೆಲ್ಲರಿಗೂ ತೊಂದರೆಯಾಗುತ್ತದೆ. ಜನರು ಆಕ್ರೋಶದಿಂದ ಆ ಕಡೆ ಬರುವುದನ್ನೇ ಬಿಟ್ಟರೆ ಅಲ್ಲಿನ ಅಂಗಡಿಗಳಿಗೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಹೊಣೆ ಯಾರು? ಮುಂದಿನ ವರ್ಷದಿಂದ ಜನಸಾಮಾನ್ಯರು ಕದ್ರಿ ಪಾರ್ಕ್ ಗೆ ಕಾಲಿಡಲೂ ಸಹ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಬರುವುದಿಲ್ಲ ಅಂತ ಏನು ಗ್ಯಾರಂಟಿ? ಕೂಡಲೇ ಇಂತಹ ಜನ ವಿರೋಧಿ ಅವೈಜ್ಞಾನಿಕ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಇದೀಗ ಕಾಂಗ್ರೆಸ್ ನೇತೃತ್ವದ ಪಾಲಿಕೆಯು ಇಲ್ಲಿನ ದುಡಿಯುವ ವರ್ಗದ ಜನತೆಗೆ ನಾವು ಯಾವುದೇ ಹೊಂದರೆ ಮಾಡುವುದಿಲ್ಲ ಎನ್ನುತ್ತಲೇ, ಪರ್ಯಾಯ ವ್ಯವಸ್ಥೆ ಕೂಡಾ ಮಾಡದೇ, ಏಕಾಏಕಿ ಗೂಡಂಗಡಿಗಳನ್ನು ತೆರವುಗೊಳಿಸಿದ್ದು ದುಡಿಯುವ ವರ್ಗದ ಮೇಲಿನ ಪ್ರಹಾರವಾಗಿದ್ದು ಇದು ಖಂಡನೀಯ ಎಂದು ಹೇಳಿದರು.

ನಗರದ ಜೈಲ್ ಜಾಮರ್ ಸಮಸ್ಯೆಗೆ ಹೈಕೋರ್ಟ್ ಮಧ್ಯ ಪ್ರವೇಶ – ನಗರದ ಜೈಲ್ ಜಾಮ‌ರ್ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿ ಆಯ್ತು, ಸಚಿವರ ಗಮನಕ್ಕೆ ತಂದೂ ಆಯ್ತು, ಕೊನೆಗೆ ಅನಿವಾರ್ಯವಾಗಿ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಯಿತು, ಆದರೂ ಇಲ್ಲಿನ ಜನರ ಸಮಸ್ಯೆಗೆ ಮುಕ್ತಿ ಸಿಕ್ಕಿರಲಿಲ್ಲ. ಇದೀಗ ಇಲ್ಲಿನ ವಕೀಲರ ಮೂಲಕ ಸ್ವತಃ ರಾಜ್ಯ ಹೈಕೋರ್ಟ್ ಮಧ್ಯ ಪ್ರವೇಶಿಸಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಇನ್ನಾದರೂ ಈ ದಪ್ಪ ಚರ್ಮದ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾಕ್ಕಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ಹೊಂದರೆ ಮುಂದುವರಿದಿದ್ದು ಇನ್ನೂ ಸಹ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಖಂಡನೀಯ, ಮೊನ್ನೆಯವರೆಗೆ ಇದ್ದ ಬದ್ದ ಅಧಿಕಾರಿಗಳನ್ನೆಲ್ಲಾ ಅವೈಜ್ಞಾನಿಕ ಸಮೀಕ್ಷೆಗೆ ನಿಯೋಜಿಸಿಕೊಂಡ ಪರಿಣಾಮ ಎಷ್ಟೇ ತುರ್ತು ಪರಿಸ್ಥಿತಿಯಿದ್ದರೂ ಸಾರ್ವಜನಿಕರಿಗೆ ಇ-ಖಾತಾ ಲಭಿಸಿರಲಿಲ್ಲ. ಇದೀಗ ಸಮೀಕ್ಷೆ ಮುಗಿದು ಅಧಿಕಾರಿಗಳು ಬಂದಿದ್ದಾರೆ ಆದರೆ ಸರ್ವರ್ ಇಲ್ಲ. ಹೀಗಾದರೆ ಸಾರ್ವಜನಿಕರ ತಾಳ್ಮೆಯ ಕಟ್ಟೆಯೊಡೆಯುತ್ತದೆ. ಕಳೆದ ಎರಡು ವರ್ಷಗಳಿಂದಲೂ ಇರುವ ಈ ಸಮಸ್ಯೆಯ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ, ಸಂಬಂಧಪಟ್ಟ ಸಚಿವರಿಗೂ ಮನವಿ ಮಾಡಿದ್ದೇನೆ. ಆದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾಗರಿಕರಿಗೆ ತೊಂದರೆ ತಪ್ಪಿಲ್ಲ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಾದ ರಸ್ತೆ ಗುಂಡಿ ಹಾಗೂ ಕಸದ ಸಮಸ್ಯೆ:- ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗಿ ಸಾರ್ವಜನಿಕರು ತೊಂದರೆ ಅನುಭವಿಸಿರುವ ಅನೇಕ ಪ್ರಕರಣಗಳು ನಡೆದಿದೆ. ಆದರೂ ಆಳುವ ಸರ್ಕಾರ ದುರಸ್ಥಿಗೆ ಅನುದಾನ ನೀಡದೇ ಕಣ್ಣು ಮುಚ್ಚಿ ಕೂತಿದೆ. ನಗರದಲ್ಲಿ ಕಸದ ಸಮಸ್ಯೆಯಂತೂ ಹೇಳತೀರದಾಗಿದ್ದು ಗಾಂಧಿನಗರದ ಶಾಲೆಯ ಹತ್ತಿರ, ಮರೋಳಿಯ ಬಸ್ ನಿಲ್ದಾಣ, ಹೀಗೆ ಅನೇಕ ಕಡೆಗಳಿಂದ ದೂರುಗಳು ಬರುತ್ತಿವೆ. ಒಂದು ಕಾಲದಲ್ಲಿ ಇಡೀ ದೇಶಕ್ಕೆ ಸ್ವಚ್ಛತೆಗೆ ಬ್ರಾಂಡ್ ಆಗಿದ್ದ ಮಂಗಳೂರಿನಲ್ಲೇ ಇಂದು ರಸ್ತೆಗಳ ಎಲ್ಲೆಡೆ ಕಸ ಬಿದ್ದಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೂ ಅದನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ಧಿ ವಿಷಯಗಳು ಪಾತಾಳಕ್ಕಿಳಿದಿದ್ದರೂ, ಬೆಲೆ ಏರಿಕೆ, ಭ್ರಷ್ಟಾಚಾರಗಳು ಮಾತ್ರ ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಅನುದಾನ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಯಾವುದೇ ಅನುದಾನಗಳು ಬರುತ್ತಿಲ್ಲ ಹೀಗಾದರೆ ಕ್ಷೇತ್ರದಲ್ಲಿ ಆಗಬೇಕಿರುವ ತುರ್ತು ಕಾಮಗಾರಿಗಳು, ಅಭಿವೃದ್ಧಿ ಕಾರ್ಯಗಳು ನಡೆಯುವುದಾದರೂ ಹೇಗೆ? ಎಂದು ಆಕ್ರೋಶಹೊರಹಾಕಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದಲ್ಲಿ ವೈಫಲ್ಯ ಅನುಭವಿಸಿದ್ದು ಮಾತ್ರವಲ್ಲದೇ ನಮ್ಮ ಮಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಮಾತ್ರ ಅಕ್ಷಮ್ಯವಾಗಿದೆ. ಮಂತ್ರಿಗಳು ಜಿಲ್ಲೆಗೆ ಬಂದಾಗ ಕಾಟಾಚಾರಕ್ಕೆ ಹತ್ತಾರು, ನೂರಾರು ಕೋಟಿ ರೂ. ಗಳನ್ನು ಘೋಷಣೆ ಮಾಡಿ ಹೋಗುತ್ತಾರೆ. ಆ ನಂತರ ಅದು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರುವ ಸುಳ್ಳು ಘೋಷಣೆಗಳು, ಸುಳ್ಳು ಭರವಸೆಗಳು ನಮ್ಮ ಕ್ಷೇತ್ರಕ್ಕೆ ಜಿಲ್ಲೆಗೆ ಅಗತ್ಯವಿಲ್ಲ ಎಂದರು.

ಸಂಪೂರ್ಣ ಹದಗೆಟ್ಟಿರುವ ಕಂಕನಾಡಿ ಪಂಪವೆಲ್ ರಸ್ತೆಯ ದುರಸ್ತಿ ಮಗಾರಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅನುದಾನ ಮಂಜೂರುಗೊಳಿಸ ಲಾಗಿತ್ತು. ಇದೀಗ ಅದನ್ನು ರ್ಯಗತಗೊಳಿಸುವ ಸಂದರ್ಭದಲ್ಲಿ ಇಲ್ಲಸಲ್ಲದ ಅನೇಕ ಅಡ್ಡಿಗಳನ್ನು ಉಂಟು ಮಾಡಲಾಗುತ್ತಿರುವುದು ದುರಂತ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಟೀಕೆ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡ ರಮೇಶ್ ಕಂಡೇಟ್ಟ್ಟು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular