ಮಂಗಳೂರು ; ಸಾವಯವ ಕೃಷಿಕ ಗ್ರಾಹಕ ಬಳಗ (ರಿ) ಮಂಗಳೂರು, ಇವರು ಆಯೋಜಿಸುವ ಎಂಟನೇ ವರುಷದ ‘ ಹಲಸು ಹಬ್ಬ’ ಮೇ ತಿಂಗಳ ತಾರೀಖು 24 ಮತ್ತು 25 ಶನಿವಾರ ಹಾಗೂ ಭಾನುವಾರದಂದು ಶ್ರೀ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಹಾಲ್ ನಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಜಿ.ಆರ್.ಪ್ರಸಾದ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಆನಂದ್. ಕೆ, IAS ಅವರು ಮೇಳದ ಉದ್ಘಾಟನೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ‘ಕಾಂತಾರ’ ಚಲನಚಿತ್ರದ ನಟ, ‘ಗುರುವ’ ಪಾತ್ರಧಾರಿ ಶ್ರೀ ಸ್ವರಾಜ್ ಶೆಟ್ಟಿ ಹಾಗೂ ದೇಸಿ ಭತ್ತದ ತಳಿಯ ಸಂರಕ್ಷಕಿ ಶ್ರೀಮತಿ ಆಸ್ಮಬಾನು ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಶ್ರೀ ಜಿ. ಆರ್. ಪ್ರಸಾದ್ ರವರು ವಹಿಸಲಿದ್ದು, ಬಳಗದ ಗೌರವ ಮಾರ್ಗದರ್ಶಕರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಗೌರವ ಅಧ್ಯಕ್ಷರಾದ ಶ್ರೀ ಅಣ್ಣೂರು ಕೃಷ್ಣ ರಾವ್ ಅವರ ಉಪಸ್ಥಿತಿಯಿರುತ್ತಾರೆಂದು ತಿಳಿಸಿದ್ದಾರೆ.
ಹಲಸು ಮೇಳದಲ್ಲಿ ರಾಜ್ಯಾದ್ಯಂತದ ರೈತರು ಭಾಗವಹಿಸಲಿದ್ದು ವಿವಿಧ ಬಗೆಯ ಹಲಸು ಅಲ್ಲದೇ ಸಾವಯವ ರೀತಿಯಲ್ಲಿ ತಯಾರಿಸಿದ (ಸಕ್ಕರೆ, ಮೈದಾ, ರಾಸಾಯನಿಕ ಬಣ್ಣ ಅಥವಾ ಸುವಾಸನೆಯನ್ನು ಉಪಯೋಗಿಸದೆ, ತೆಂಗಿನ ಎಣ್ಣೆ ಬಳಸಿ) ಹಲಸಿನ ಅನೇಕ ವಿವಿಧ ತಾಜಾ ತಿಂಡಿ ತಿನಿಸುಗಳೂ ದೊರೆಯಲಿವೆ. ಇತರ ಸಾವಯವ ಉತ್ಪನ್ನಗಳ ಮಾರಾಟವೂ ಇರುತ್ತದೆ ಎಂದು ತಿಳಿಸಿದ್ದಾರೆ.
ಹಲಸು ಹಬ್ಬದಲ್ಲಿ ಈ ಬಾರಿ ವಿಶೇಷವಾಗಿ ಸಾರ್ವಜನಿಕರಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು. ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಸದವಕಾಶವಾಗಿರುತ್ತದೆ. ಹಲಸಿನ ವಿವಿಧ 9 ವಿಭಾಗಗಳಲ್ಲಿ 10 ಸ್ಪರ್ಧೆ ನಡೆಯುವುದು ಈ ಬಾರಿಯ ವಿಶೇಷವಾಗಿದ್ದು ಎಲ್ಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ಅಲ್ಲದೇ ಸ್ಮರಣಿಕೆಯನ್ನು ನೀಡಿ ಪುರಸ್ಕರಿಸಲಾಗುವುದು. ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೆ, ಸರ್ಟಿಫೀಕೇಟ್, ಮೆಡಲ್, ಕೊಡಮಾಡಲಾಗುವುದು. ಹಲಸಿನ ಎರಡು ವಿಭಾಗದಲ್ಲಿ, ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು. ರಾಜ್ಯಾದ್ಯಂತ ಸುಮಾರು ಹಲವು ಜಿಲ್ಲೆಗಳಿಂದ ರೈತರು ಬರಲಿದ್ದು ವಿಭಿನ್ನವಾದ ತಳಿಗಳನ್ನು ಮಾರಾಟಕ್ಕೆ ತರಲಿದ್ದಾರೆಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶರತ್ ಕುಮಾರ್,ರತ್ನಾಕರ್ ಕುಲಾಯಿ,ದಕ್ಷಾಯಿನಿ ವಿಶ್ವೆಶ್ವರ್,ಹಾಗೂ ಜಯಶ್ರೀ ಪ್ರವೀಣ್ ರವರು ಉಪಸ್ಥಿತರಿದ್ದರು.


