ಮಂಗಳೂರು ; ವಿಕಲಚೇತನ ಹೂವಿನ ವ್ಯಾಪಾರಿಗೆ ಮಾಜಿ ಕಾರ್ಪೋರೇಟರ್ ಹಾಗೂ ಅವರ ಬೆಂಬಲಿಗರು ಕಿರುಕುಳ ನೀಡುತ್ತಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.
ಸ್ಥಳೀಯ ಕಾರ್ಪೊರೇಟರ್ ಜನರ ಸಮಸ್ಯೆಗಳನ್ನು ಸ್ಪಂದಿಸದೆ ಜನಸಾಮಾನ್ಯರಿಗೆ ಎಲ್ಲಾ ವಿಚಾರದಲ್ಲಿ ತೊಂದರೆಕೊಡುತ್ತಿರುವುದು ಸ್ಥಳೀಯರ ಮಾತು. ಈ ಕಿರುಕುಳದ ಬಗ್ಗೆ ಹೂವಿನ ವ್ಯಾಪಾರಿಯಾಗಿರುವ ಚಂದ್ರಹಾಸ ಎಂಬವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಇದರ ಜೊತೆಗೆ ಮಹಿಳಾ ಕಾರ್ಪೋರೇಟರ್ ಒಬ್ಬರು ಕಾರ್ಪೋರೇಷನ್ ಮೂಲಕ ಅಂಗಡಿ ದ್ವಂಸ ಮಾಡಿಸುವುದಾಗಿ ಹೇಳಿದ ವಿಡಿಯೋ ಕೂಡಾ ವೈರಲ್ ಆಗಿತ್ತು. ಈ ಎಲ್ಲಾ ಘಟನೆಗಳ ಬಳಿಕ ಡಿವೈಎಫ್ಐ ಸಂಘಟನೆ ವಿಕಲಚೇತನ ಹೂವಿನ ವ್ಯಾಪಾರಿ ಚಂದ್ರಹಾಸ ಪೂಜಾರಿಯವರ ನೆರವಿಗೆ ದಾವಿಸಿದೆ. ಚಂದ್ರಹಾಸ ಪೂಜಾರಿ ಅವರಿಗೆ ಬೆದರಿಕೆ ಹಾಕಿದ ಮಾಜಿ ಕಾರ್ಪೋರೇಟರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಕೇಸು ದಾಖಲಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಚಂದ್ರಹಾಸ ಪೂಜಾರಿ ಅವರು ಕಳೆದ ಐದಾರು ವರ್ಷಗಳಿಂದ ಪಡೀಲ್ ಬಳಿಯಲ್ಲಿ ಬೀದಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ. ಶೇಖಡಾ 70 ರಷ್ಟು ಅಂಗವೈಕಲ್ಯತೆ ಹೊಂದಿರುವ ಅವರು ಸ್ವಾವಲಂಬಿ ಬದುಕಿಗಾಗಿ ಈ ವ್ಯಾಪಾರ ಮಾಡುತ್ತಿದ್ದಾರೆ. ಆದ್ರೆ ಅವರಿಂದ ಹಫ್ತಾಗೆ ಬೇಡಿಕೆ ಇಟ್ಟು , ಅವರನ್ನು ಮಟ್ಕಾ ಕೇಸ್ನಲ್ಲಿ ಜೈಲಿಗೆ ಕಳುಹಿಸುವ ಹಾಗೂ ಅವರ ಅಂಗಡಿಯನ್ನು ದ್ವಂಸ ಮಾಡುವ ಬೆದರಿಕೆ ಹಾಕಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಮಹಿಳಾ ಕಾರ್ಪೋರೇಟರ್ ಜೊತೆ ಮಾತನಾಡಿರುವ ವಿಡಿಯೋ ಕೂಡಾ ವೈರಲ್ ಆಗಿದೆ.
ಹೀಗಾಗಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಸಂಘಟನೆ ಆಗ್ರಹಿಸಿದೆ .