Saturday, October 3, 2026
Homeಜಿಲ್ಲೆಮಂಗಳೂರು : ಮನೆಗಳ್ಳರ ಜಾಲ ಭೇದಿಸಿದ ಪೊಲೀಸರು,ದೆಹಲಿ ಮೂಲದ ಇಬ್ಬರ ಬಂಧನ ; ₹18 ಲಕ್ಷ...

ಮಂಗಳೂರು : ಮನೆಗಳ್ಳರ ಜಾಲ ಭೇದಿಸಿದ ಪೊಲೀಸರು,ದೆಹಲಿ ಮೂಲದ ಇಬ್ಬರ ಬಂಧನ ; ₹18 ಲಕ್ಷ ಮೌಲ್ಯದ ಕಳವು ಸೊತ್ತು ವಶ.

ಮಂಗಳೂರು : ನಗರದ ಬರ್ಕೆ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು, ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಗುಜರಾತ್‌ನ ವಡೋದರಾದಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಅರ್ಮಾನ್ ಖಾನ್ @ ಅಮನ್ ಸೋನಿ (34) ಹಾಗೂ ಸಂಜೀವ್ ಕುಮಾರ್ @ ಜಾನಿ (34) ಎಂದು ಗುರುತಿಸಲಾಗಿದೆ. ಅರ್ಮಾನ್ ಖಾನ್ ಗೋಕುಲ್ ಪುರಿ, ಈಶಾನ್ಯ ದೆಹಲಿ ಮೂಲದವನಾಗಿದ್ದು, ಸಂಜೀವ್ ಕುಮಾರ್ ನವದೆಹಲಿಯ ಸುಲ್ತಾನ್ ಪುರಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ಮನೆಗಳಲ್ಲಿ ಕಳ್ಳತನ : ಸೆಪ್ಟೆಂಬರ್ 28ರಂದು ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿಯ ಮನೆಯೊಂದಕ್ಕೆ ಕನ್ನ ಹಾಕಿದ್ದ ಆರೋಪಿಗಳು, ಮನೆಯ ಮುಂಭಾಗದ ಬಾಗಿಲಿನ ಕೊಂಡಿ ಮುರಿದು ಒಳನುಗ್ಗಿದ್ದರು. ಮನೆಯಲ್ಲಿದ್ದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ ಸೇರಿದಂತೆ ವಿವಿಧ ವಸ್ತುಗಳನ್ನು ಕಳವು ಮಾಡಿದ್ದರು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದಕ್ಕೂ ಮುನ್ನ ಸೆಪ್ಟೆಂಬರ್ 27ರಂದು ಬೊಕ್ಕಪಟ್ಣ ರಸ್ತೆಯ ಮತ್ತೊಂದು ಮನೆಯ ಲಾಕರ್ ಒಡೆದು ಕಳ್ಳತನಕ್ಕೆ ಯತ್ನಿಸಲಾಗಿತ್ತು. ಯಾವುದೇ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆಯಲ್ಲಿ ಚೆಕ್ ಪುಸ್ತಕಗಳನ್ನು ಕಳವು ಮಾಡಲಾಗಿತ್ತು. ಈ ಪ್ರಕರಣ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ರೈಲಿನಲ್ಲಿ ದೆಹಲಿ ಕಡೆಗೆ ಪರಾರಿ
ಎರಡು ಪ್ರಕರಣಗಳ ತನಿಖೆ ಕೈಗೊಂಡ ವಿಶೇಷ ಪೊಲೀಸ್ ತಂಡವು ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಕಳ್ಳತನದ ಬಳಿಕ ಆರೋಪಿಗಳು ರೈಲಿನಲ್ಲಿ ದೆಹಲಿ ಕಡೆಗೆ ತೆರಳುತ್ತಿರುವುದು ಪೊಲೀಸರಿಗೆ ತಿಳಿದುಬಂದಿತ್ತು. ತಕ್ಷಣ ಗುಜರಾತ್ ಪೊಲೀಸರ ಸಹಕಾರ ಪಡೆದುಕೊಂಡ ಮಂಗಳೂರು ಪೊಲೀಸರ ತಂಡ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಸೆಪ್ಟೆಂಬರ್ 29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಅರ್ಮಾನ್ ವಿರುದ್ಧ 40ಕ್ಕೂ ಅಧಿಕ ಪ್ರಕರಣ.

ಬಂಧಿತರ ಪೈಕಿ ಅರ್ಮಾನ್ ಖಾನ್ @ ಅಮನ್ ಸೋನಿ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಬಾಕಿ ಇರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.

ನ್ಯಾಯಾಂಗ ಬಂಧನ..

ವಡೋದರಾದಲ್ಲಿ ಬಂಧಿಸಿದ ಆರೋಪಿಗಳನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ. ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular