ಮಂಗಳೂರು : ನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಹಲವು ದಿನಗಳಿಂದ ಅವ್ಯವಸ್ಥೆಯ ತಾಣವಾಗಿದ್ದ ಕಾವೂರು-ಜ್ಯೋತಿ ನಗರದ ಬಸ್ ನಿಲ್ದಾಣಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿದ “ಮೀಡಿಯಾ ಮನಸುಗಳು” ತಂಡದ ಸದಸ್ಯರು ಸ್ವತಃ ಸ್ಥಳಕ್ಕೆ ತೆರಳಿ ಸುಮಾರು ಎರಡೂವರೆ ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಡೆಸಿ ಬಸ್ ನಿಲ್ದಾಣವನ್ನು ಸಾರ್ವಜನಿಕ ಬಳಕೆಗೆ ಯೋಗ್ಯವಾಗಿಸಿದ್ದಾರೆ.





ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಈ ಬಸ್ ತಂಗುದಾಣ ಕಳೆದ ಕೆಲ ಸಮಯದಿಂದ ಸೂಕ್ತ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿತ್ತು. ನಿಲ್ದಾಣದ ಸುತ್ತಮುತ್ತ ದಟ್ಟವಾಗಿ ಬೆಳೆದಿದ್ದ ಹುಲ್ಲು, ಗಿಡಗಂಟಿಗಳು ಹಾಗೂ ಕಳೆಗಳಿಂದಾಗಿ ಪ್ರಯಾಣಿಕರು ನಿಲ್ದಾಣದೊಳಗೆ ಪ್ರವೇಶಿಸುವುದೇ ಕಷ್ಟವಾಗಿತ್ತು. ಇದರ ಜೊತೆಗೆ ಫುಟ್‌ಪಾತ್ ಕೂಡ ಗಿಡಗಂಟಿಗಳಿಂದ ಆವೃತವಾಗಿದ್ದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿತ್ತು. ಸಂಜೆ ವೇಳೆ ನಿಲ್ದಾಣದ ಪರಿಸರ ಅಸುರಕ್ಷಿತವಾಗುತ್ತಿದ್ದು, ಹಿರಿಯರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಬಸ್ಸಿಗಾಗಿ ಕಾಯುವಾಗ ಬಿಸಿಲು-ಮಳೆಗೆ ಹೊರಗಡೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾರ್ವಜನಿಕರ ಕರೆಗೆ ಸ್ಪಂದಿಸಿದ “ಮೀಡಿಯಾ ಮನಸುಗಳು”
ಬಸ್ ನಿಲ್ದಾಣದ ದುಸ್ಥಿತಿಯನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರೊಬ್ಬರು ಸಮಸ್ಯೆ ಪರಿಹರಿಸುವಂತೆ “ಮೀಡಿಯಾ ಮನಸುಗಳು” ತಂಡವನ್ನು ಸಂಪರ್ಕಿಸಿದ್ದರು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿತು. ಬಳಿಕ ಪೊರಕೆ ಹಾಗೂ ಕಳೆ ಕತ್ತರಿಸುವ ಸಲಕರಣೆಗಳೊಂದಿಗೆ ಸ್ಥಳಕ್ಕೆ ತೆರಳಿದ ತಂಡದ ಸದಸ್ಯರು ಸ್ವತಃ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಗಿಡಗಂಟಿಗಳಿಂದ ಮುಚ್ಚಿಹೋಗಿದ್ದ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಕಸ-ಕಳೆ ತೆರವುಗೊಳಿಸಿ ಸಾರ್ವಜನಿಕರು ಆರಾಮವಾಗಿ ಬಳಸುವಂತೆ ಮಾಡಿದರು.
ಪ್ರಯಾಣಿಕರಿಂದ ಮೆಚ್ಚುಗೆ ಈ ಸಮಾಜಮುಖಿ ಕಾರ್ಯದಲ್ಲಿ “ಮೀಡಿಯಾ ಮನಸುಗಳು” ತಂಡದ ಪ್ರಮುಖರಾದ ಶಶಿ ಬೆಳ್ಳಾಯ, ಬಾಲಕೃಷ್ಣ ಶೆಟ್ಟಿ, ಸಂದೇಶ್ ಶೆಟ್ಟಿ, ಶಿವು ಕುಲಾಲ್, ಗಿರೀಶ್ ಮಣೇಲ್ ಹಾಗೂ ಅನೂಪ್ ಸೂರಿಂಜೆ ಸಕ್ರಿಯವಾಗಿ ಪಾಲ್ಗೊಂಡರು.
ಬಹುಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಬಸ್ ನಿಲ್ದಾಣ ಸ್ವಚ್ಛಗೊಂಡಿರುವುದನ್ನು ಕಂಡ ಸ್ಥಳೀಯರು ಹಾಗೂ ಬಸ್ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಮಾತೃಶ್ರೀ ಹೋಟೆಲ್ ಮಾಲೀಕ ಯತಿರಾಜ್ ಶೆಟ್ಟಿ ಅವರು ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಾದ ನೀರಿನ ವ್ಯವಸ್ಥೆ ಮಾಡಿಕೊಡುವ ಮೂಲಕ ಸಹಕಾರ ನೀಡಿದರು.
ಸಾರ್ವಜನಿಕರ ಸಮಸ್ಯೆಗೆ ಜವಾಬ್ದಾರಿಯುತ ಆಡಳಿತ ವ್ಯವಸ್ಥೆ ಸೂಕ್ತವಾಗಿ ಸ್ಪಂದಿಸದ ಸಂದರ್ಭದಲ್ಲಿ, ಸಮಾಜಮುಖಿ ಯುವಕರ ತಂಡವೊಂದು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಸ್ಥಳೀಯ ಮಟ್ಟದಲ್ಲಿಯೇ ಗಮನಾರ್ಹ ಬದಲಾವಣೆ ತರಲು ಸಾಧ್ಯ ಎಂಬುದಕ್ಕೆ ಕಾವೂರು-ಜ್ಯೋತಿನಗರದ ಈ ಸ್ವಚ್ಛತಾ ಕಾರ್ಯ ಸಾಕ್ಷಿಯಾಗಿದೆ.

