Saturday, March 14, 2026
Flats for sale
Homeಜಿಲ್ಲೆಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ. 50ರಷ್ಟು ಕುಡಿಯುವ ನೀರು ಕಲುಷಿತ :...

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ. 50ರಷ್ಟು ಕುಡಿಯುವ ನೀರು ಕಲುಷಿತ : ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ..!

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಶೇ. 50ರಷ್ಟು ಪ್ರದೇಶಗಳಿಗೆ ಶುದ್ಧೀಕರಿಸದ ನೀರು ಪೂರೈಕೆ ಮಾಡುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲು ಕಾರ್ಪೊರೇಟರ್‌ಗಳು ಮತ್ತು ತಜ್ಞರನ್ನೊಳಗೊಂಡ ಸತ್ಯಶೋಧನಾ ಸಮಿತಿ ರಚಿಸಿ ಅದರ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಪಾಲಿಕೆಯ ವಿಪಕ್ಷ ಸದಸ್ಯರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲುಷಿತವಾಗಿರುವ 13 ನದಿಗಳ ಪೈಕಿ ನೇತ್ರಾವತಿಯೂ ಸೇರಿರುವ ವೈಜ್ಞಾನಿಕ ವರದಿ ಬಹಿರಂಗವಾದ ಬಳಿಕವೂ ಸಂಸ್ಕರಿಸದ ಮಲಿನ ನೀರನ್ನೇ ಜನರಿಗೆ ನೀಡುತ್ತಿರುವುದು ಆತಂಕದ ವಿಚಾರ. ಜ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡುವ ಮೊದಲು ಈ ಕುರಿತು ಸತ್ಯಶೋಧನಾ ವರದಿ ಸಿದ್ಧಪಡಿಸಿ ಸಿಎಂ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

ಶುದ್ಧೀಕರಿಸದ ನೀರಿನಿಂದ ಜನರಿಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ಮಹಾನಗರ ಪಾಲಿಕೆಯ ಆಡಳಿತವೇ ನೇರ ಹೊಣೆಯಾಗಲಿದೆ. ಈ ವಿಚಾರವನ್ನು ಇದುವರೆಗೂ ಸರ್ಕಾರದ ಗಮನಕ್ಕೆ ಏಕೆ ತರಲಿಲ್ಲ? ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಕುರಿತು ನಗರಾಭಿವೃದ್ಧಿ ಸಚಿವರ ಗಮನಕ್ಕೂ ತರಲಾಗಿದೆ. ಈ ಕುರಿತು ಸರ್ಕಾರ ಮಧ್ಯ ಪ್ರವೇಶಿಸಬೇಕು ಎನ್ನುವ ಮನವಿ ಮಾಡಲಾಗಿದೆ ಎಂದು ಐವನ್ ಡಿಸೋಜ ತಿಳಿಸಿದರು.

ಹಳೆ ಮಂಗಳೂರು ಭಾಗಕ್ಕೆ ಬೆಂದೂರ್‌ವೆಲ್‌ನಲ್ಲಿ ಶುದ್ಧೀಕರಣ ಮಾಡಿ ನೀರು ಪೂರೈಸಲಾಗುತ್ತಿದೆ. ಆದರೆ ಬೈಕಂಪಾಡಿ, ಪಣಂಬೂರು, ಸುರತ್ಕಲ್‌ ಭಾಗಕ್ಕೆ ಎಲ್ಲೂ ಶುದ್ಧೀಕರಿಸದೆ ತುಂಬೆ ಅಣೆಕಟ್ಟಿನಿಂದ ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ನೇತ್ರಾವತಿ ನೀರು ಕಲುಷಿತವಾಗಿದೆ ಎಂಬ ವರದಿ ಬಂದ ಬಳಿಕವೂ ಶುದ್ಧೀಕರಣಕ್ಕೆ ಏಕೆ ಕ್ರಮ ಕೈಗೊಂಡಿಲ್ಲ? ಈ ವಿಚಾರದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಒಳಚರಂಡಿ ವ್ಯವಸ್ಥೆ, ಎಸ್‌ಟಿಪಿಗಳು, ವೆಟ್‌ವೆಲ್‌ಗಳಿಗಾಗಿ ಸ್ಮಾರ್ಟ್‌ ಸಿಟಿ ಅನುದಾನ ಸೇರಿದಂತೆ ಕೋಟ್ಯಂತರ ರು. ಖರ್ಚು ಮಾಡಲಾಗಿದೆ. ಆದರೆ ರಾಜಕಾಲುವೆಗಳಲ್ಲಿ ಒಳಚರಂಡಿ ನೀರು ಹರಿಯೋದು 10 ವರ್ಷಗಳಲ್ಲಿ 50 ಪಟ್ಟು ಹೆಚ್ಚಿದೆ. ಕೋಟ್ಯಂತರ ರು. ವೆಚ್ಚ ಮಾಡಿ ಅಭಿವೃದ್ಧಿಪಡಿಸಿದ ಕೆರೆಗಳು ಸೀವೇಜ್‌ ಕೆರೆಗಳಾಗಿಬಿಟ್ಟಿವೆ. ಜನರಿಗೆ ಕುಡಿಯುವ ನೀರೂ ಕಲುಷಿತ, ಮಹಾನಗರ ಪಾಲಿಕೆಯ ಕ್ಷೇತ್ರಗಳನ್ನು ಪ್ರತಿನಿಧಿಸುವ ಇಬ್ಬರು ಶಾಸಕರು ಈ ವಿಚಾರದಲ್ಲಿ ಮೌನ ವಹಿಸಿದ್ದು ಏಕೆ ಎಂದು ಐವನ್ ಪ್ರಶ್ನಿಸಿದರು. ಪಾಲಿಕೆಯ ವಿಪಕ್ಷ ನಾಯಕ ಅನಿಲ್‌ ಕುಮಾರ್‌, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ಸಂಶುದ್ದೀನ್‌, ಕೇಶವ್‌, ಭಾಸ್ಕರ ಕೆ., ಮಾಜಿ ಕಾರ್ಪೊರೇಟರ್‌ ಹರಿನಾಥ್‌ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular