ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳೂರು ನಗರದ ವಿವಿಧೆಡೆ ಸೆ.5ರಂದು ಮೊಸರುಕುಡಿಕೆ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದ್ದು, ಮಂಗಳೂರು ನಗರ ಪೊಲೀಸರು ಸಂಚಾರ ಸಲಹೆಗಳನ್ನು ಪ್ರಕಟಿಸಿದ್ದಾರೆ.
ಮೆರವಣಿಗೆ ಸಾಗುವ ರಸ್ತೆಗಳು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ಪೊಲೀಸರು ಸೂಚಿಸಿದ್ದು, ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.
ತೊಕ್ಕೊಟ್ಟು ಒಳಪೇಟೆ : ತೊಕ್ಕೊಟ್ಟು ಜಂಕ್ಷನ್ನಿಂದ ಕೊಲ್ಯ ಜಂಕ್ಷನ್ವರೆಗೆ ಹಾಗೂ ಉಳ್ಳಾಲ ಅಬ್ಬಕ್ಕ ವೃತ್ತ–ಒಳಪೇಟೆ ಭಾಗದಲ್ಲಿ ಸಂಚಾರ ದಟ್ಟಣೆ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ : ತೊಕ್ಕೊಟ್ಟು ಜಂಕ್ಷನ್ನಿಂದ ತಲಪಾಡಿ ಕಡೆಗೆ ತೆರಳುವವರು ಸರ್ವಿಸ್ ರಸ್ತೆ ಮೂಲಕ ದೇರಳಕಟ್ಟೆ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ, ಮಡ್ಯಾರ್–ಮಾಡೂರು–ಬೀರಿಕೋಟೆಕಾರ್ ಮಾರ್ಗ ಬಳಸಬಹುದು. ಉಳ್ಳಾಲ ಅಬ್ಬಕ್ಕ ವೃತ್ತ ಹಾಗೂ ತೊಕ್ಕೊಟ್ಟು ಒಳಪೇಟೆ ಕಡೆಗೆ ತೆರಳುವವರು ಬೀರಿಕೋಟೆಕಾರ್–ಸೋಮೇಶ್ವರ ಮಾರ್ಗ ಬಳಸಬಹುದು.
ಕದ್ರಿ ಕಂಬಳ : ಬಟ್ಟಗುಡ್ಡೆ ಜಂಕ್ಷನ್ನಿಂದ ಕದ್ರಿ ಕಂಬಳ–ಭಾರತ್ ಬೀಡಿ ವರೆಗೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ : ಬಟ್ಟಗುಡ್ಡೆಯಿಂದ ಕದ್ರಿ ಕಂಬಳ ಕಡೆಗೆ ತೆರಳುವವರು ಬಿಜೈ ಜಂಕ್ಷನ್–ಪಿಂಟೋ ಬೇಕರಿ–ಕರಂಗಲಪಾಡಿ ಮಾರ್ಗ ಬಳಸಬಹುದು. ಭಾರತ್ ಬೀಡಿ ಕಡೆಯಿಂದ ಬಟ್ಟಗುಡ್ಡೆ ಕಡೆಗೆ ತೆರಳುವವರು ಮಲ್ಲಿಕಟ್ಟೆ–ನಂತೂರು ಮಾರ್ಗ ಬಳಸಬಹುದು.
ಅತ್ತಾವರ : ಕೋಟಿಚೆನ್ನಯ ವೃತ್ತದಿಂದ ಬಾಬುಗುಡ್ಡೆ–ಅತ್ತಾವರ ಕೆಎಂಸಿ ರಸ್ತೆ–ಆನಂದ ಶೆಟ್ಟಿ ವೃತ್ತದವರೆಗೆ ಸಂಚಾರ ದಟ್ಟಣೆ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ : ಕೋಟಿಚೆನ್ನಯ ವೃತ್ತದಿಂದ ಅತ್ತಾವರ ಕಡೆಗೆ ತೆರಳುವವರು ವೆಲೆನ್ಸಿಯಾ ಮಾರ್ಗ ಬಳಸಬಹುದು. ಅತ್ತಾವರದಿಂದ ಕೋಟಿಚೆನ್ನಯ ವೃತ್ತದ ಕಡೆಗೆ ತೆರಳುವವರು ಆನಂದ ಶೆಟ್ಟಿ ವೃತ್ತದಲ್ಲಿ ಎಡಕ್ಕೆ ತಿರುಗಿ ಎಸ್.ಎಲ್. ಮಥಾಯಸ್ ರಸ್ತೆ–ಹೈಲ್ಯಾಂಡ್ ಜಂಕ್ಷನ್ ಮೂಲಕ ಸಂಚರಿಸಬಹುದು.
ಕೊಟ್ಟಾರ : ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಜಂಕ್ಷನ್ವರೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ: ಲಾಲ್ಬಾಗ್/ನಾರಾಯಣಗುರು ವೃತ್ತದಿಂದ ಕೊಟ್ಟಾರ ಚೌಕಿ ಕಡೆಗೆ ತೆರಳುವವರು ಕೆಎಸ್ಆರ್ಟಿಸಿ–ಕುಂಟಿಕಾನ ಮಾರ್ಗ ಬಳಸಬಹುದು. ಕೊಟ್ಟಾರದಿಂದ ಲಾಲ್ಬಾಗ್ ಕಡೆಗೆ ತೆರಳುವ ಲಘು ವಾಹನಗಳು ಕುಂಟಿಕಾನ–ಬಿಜೈ–ಕೆಎಸ್ಆರ್ಟಿಸಿ ಮಾರ್ಗ ಬಳಸಬಹುದು.
ಘನ ವಾಹನಗಳು ಕುಂಟಿಕಾನ–ಕೆಪಿಟಿ ವೃತ್ತ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ. ವಾಹನ ಸವಾರರಿಗೆ ಪೊಲೀಸರ ಮನವಿ ಸೆ.5ರಂದು ನಡೆಯಲಿರುವ ಮೊಸರುಕುಡಿಕೆ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳ ಹಿನ್ನೆಲೆಯಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಹಾಗೂ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಬಾರದು. ಸಂಚಾರ ನಿಯಂತ್ರಣದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

