Sunday, October 4, 2026
Homeಜಿಲ್ಲೆಮಂಗಳೂರು : ಬೆಳೆ ವಿಮೆ ಪರಿಹಾರ ₹1.28 ಲಕ್ಷದಿಂದ ₹20 ಸಾವಿರಕ್ಕೆ ಕುಸಿತ : ಸರ್ಕಾರದ...

ಮಂಗಳೂರು : ಬೆಳೆ ವಿಮೆ ಪರಿಹಾರ ₹1.28 ಲಕ್ಷದಿಂದ ₹20 ಸಾವಿರಕ್ಕೆ ಕುಸಿತ : ಸರ್ಕಾರದ ವಿರುದ್ಧ ಹರೀಶ್ ಪೂಂಜಾ ಗಂಭೀರ ಆರೋಪ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅಡಕೆ ಸೇರಿದಂತೆ ವಿವಿಧ ಬೆಳೆಗಾರರಿಗೆ ಸಿಗಬೇಕಾದ ಬೆಳೆ ವಿಮೆ ಪರಿಹಾರದಲ್ಲಿ ಭಾರೀ ಪ್ರಮಾಣದ ಕಡಿತವಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರೈತರ ಸಂಕಷ್ಟದ ಸಂದರ್ಭದಲ್ಲಿ ನೆರವಾಗಬೇಕಿದ್ದ ಬೆಳೆ ವಿಮೆ ಯೋಜನೆಯ ಅನುಷ್ಠಾನದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇದರಿಂದ ಜಿಲ್ಲೆಯ ರೈತರಿಗೆ ನಿರೀಕ್ಷಿತ ಪರಿಹಾರ ಸಿಗುತ್ತಿಲ್ಲ ಎಂದು ದೂರಿದರು.

ಹರೀಶ್ ಪೂಂಜಾ ಅವರ ಹೇಳಿಕೆಯ ಪ್ರಕಾರ, 2018ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹೆಕ್ಟೇರ್‌ಗೆ ಸರಾಸರಿ ₹1.28 ಲಕ್ಷದವರೆಗೆ ಬೆಳೆ ವಿಮೆ ಪರಿಹಾರ ದೊರೆಯುತ್ತಿತ್ತು. 2020-21ರ ಅವಧಿಯಲ್ಲಿ ₹60 ಸಾವಿರದಿಂದ ₹90 ಸಾವಿರದವರೆಗೆ ಹಾಗೂ 2023ರವರೆಗೆ ಸುಮಾರು ₹70 ಸಾವಿರದವರೆಗೆ ಪರಿಹಾರ ಸಿಗುತ್ತಿತ್ತು. ಆದರೆ ಇದೀಗ ಸರಾಸರಿ ಪರಿಹಾರ ಮೊತ್ತ ಸುಮಾರು ₹20 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಅವರು ಆರೋಪಿಸಿದರು.

‘ಟರ್ಮ್ ಶೀಟ್’ ನಿಯಮ ಬದಲಾವಣೆಗೆ ಆಕ್ಷೇಪ..

ವಿಮಾ ಕಂಪನಿಗಳೊಂದಿಗೆ ಮಾಡಿಕೊಂಡಿರುವ ‘ಟರ್ಮ್ ಶೀಟ್’ ನಿಯಮಗಳಲ್ಲಿ ಬದಲಾವಣೆ ಮಾಡಿರುವುದೇ ಪರಿಹಾರ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಪೂಂಜಾ ಆರೋಪಿಸಿದರು. ಹಿಂದಿನ ನಿಯಮಗಳ ಪ್ರಕಾರ ಜುಲೈ 1ರಿಂದ ಸೆಪ್ಟೆಂಬರ್ 30ರ ನಡುವಿನ ಮಳೆಯ ಪ್ರಮಾಣವನ್ನು ಆಧರಿಸಿ ಪರಿಹಾರ ನಿಗದಿಯಾಗುತ್ತಿತ್ತು. ಆದರೆ ಇದೀಗ ಮಳೆಯ ಪ್ರಮಾಣ ಲೆಕ್ಕಾಚಾರ ಮಾಡುವ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. 250 ಮಿ.ಮೀ. ಮಳೆಯಾದರೂ ಅದನ್ನು ಶೂನ್ಯ ಪರಿಹಾರಕ್ಕೆ ಪರಿಗಣಿಸುವಂತಹ ನಿಯಮಗಳಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಅವರು ದೂರಿದರು.

ಸರ್ಕಾರದ ವಿಮಾ ಪಾಲಿನ ಬಗ್ಗೆಯೂ ಪ್ರಶ್ನೆ..

ವಿಮಾ ಕಂತಿನಲ್ಲಿ ರಾಜ್ಯ ಸರ್ಕಾರದ ಪಾಲನ್ನು ಕಡಿತ ಮಾಡಲಾಗಿದೆ ಎಂಬ ಆರೋಪವನ್ನೂ ಹರೀಶ್ ಪೂಂಜಾ ಮಾಡಿದರು. ಹಿಂದೆ ರೈತರು ಶೇ.5, ಕೇಂದ್ರ ಸರ್ಕಾರ ಶೇ.10 ಮತ್ತು ರಾಜ್ಯ ಸರ್ಕಾರ ಶೇ.20ರಷ್ಟು ಪಾಲು ಪಾವತಿಸುತ್ತಿದ್ದವು. ಆದರೆ ರಾಜ್ಯ ಸರ್ಕಾರದ ಪಾಲನ್ನು ಶೇ.20ರಿಂದ ಶೇ.10ಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ನಿಗದಿತ ಅವಧಿಯಲ್ಲಿ ವಿಮಾ ಕಂಪನಿಗೆ ಪಾವತಿಸದಿರುವುದರಿಂದಲೂ ರೈತರಿಗೆ ಸಿಗಬೇಕಾದ ಪರಿಹಾರದ ಮೇಲೆ ಪರಿಣಾಮ ಬೀರಿದೆ ಎಂದು ಪೂಂಜಾ ಆರೋಪಿಸಿದರು.
ಟಾಟಾ ಎಐಜಿ ಟೆಂಡರ್ ವಿಸ್ತರಣೆಯ ಕುರಿತು ಪ್ರಶ್ನೆ ಟಾಟಾ ಎಐಜಿ ವಿಮಾ ಕಂಪನಿಗೆ ನೀಡಲಾಗಿದ್ದ ಮೂರು ವರ್ಷಗಳ ಟೆಂಡರ್ ಅವಧಿ ಮುಗಿದ ಬಳಿಕವೂ ಹೊಸ ಟೆಂಡರ್ ಕರೆಯದೆ ಮತ್ತೊಂದು ವರ್ಷ ಅವಧಿ ವಿಸ್ತರಣೆ ಮಾಡಿರುವುದರ ಕುರಿತು ಅವರು ಪ್ರಶ್ನೆ ಎತ್ತಿದರು.

ಸಮಯದ ಕೊರತೆಯ ನೆಪದಲ್ಲಿ ಹಳೆಯ ಕಂಪನಿಗೆ ಮತ್ತೆ ಅವಕಾಶ ನೀಡಿರುವುದರ ಹಿಂದೆ ಏನು ಕಾರಣ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ, ವಿಮಾ ಕಂಪನಿಯಿಂದ ರಾಜ್ಯ ಸರ್ಕಾರ ಕಿಕ್‌ಬ್ಯಾಕ್ ಪಡೆದಿದೆಯೇ ಎಂಬ ಗಂಭೀರ ಪ್ರಶ್ನೆಯನ್ನೂ ಅವರು ಮುಂದಿಟ್ಟರು. ಈ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು..

ಯು.ಟಿ. ಖಾದರ್ ವಿರುದ್ಧವೂ ಪ್ರಶ್ನೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಿಲ್ಲೆಯ ರೈತರ ಬೆಳೆ ವಿಮೆ ಸಮಸ್ಯೆ ಕುರಿತು ಏಕೆ ಮೌನವಾಗಿದ್ದಾರೆ ಎಂದು ಹರೀಶ್ ಪೂಂಜಾ ಪ್ರಶ್ನಿಸಿದರು.
ರೈತರಿಗೆ ವಾಸ್ತವವಾಗಿ ಸಿಗಬೇಕಾದ ವಿಮಾ ಪರಿಹಾರವನ್ನು ಪರಿಶೀಲಿಸಿ, ಬಾಕಿ ಇರುವ ಪರಿಹಾರವನ್ನು ಸಮರ್ಪಕವಾಗಿ ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸರ್ಕಾರ ಸೂಕ್ತ ಪರಿಹಾರ ನೀಡಲು ವಿಫಲವಾದರೆ ರೈತರ ಪರವಾಗಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಹರೀಶ್ ಪೂಂಜಾ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಪ್ರೇಮಾನಂದ ಶೆಟ್ಟಿ, ಪುಷ್ಪಾ ಮೇದಪ್ಪ, ಶೋಭೇಂದ್ರ, ಯತೀಶ್ ಆರ್ವರ್, ಉಮೇಶ್ ಬೆಳ್ತಂಗಡಿ, ಶಶಿಧರ ಕಲ್ಮಂಜ, ವಸಂತ ಪೂಜಾರಿ, ರಾಕೇಶ್ ರೈ ಸುಳ್ಯ, ಜಗನ್ನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular