ಮಂಗಳೂರು : “ಫೆ.22ರಂದು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಠಾನದ ಆಶ್ರಯದಲ್ಲಿ ಎರಡನೇ ಆವೃತ್ತಿಯ “ಹೊಂಬೆಳಕು“ ಕಾರ್ಯಕ್ರಮ ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 355 ಗ್ರಾಮ ಪಂಚಾಯತ್ ನ 6082 ಮಂದಿ ಚುನಾಯಿತ ಸದಸ್ಯರಿದ್ದಾರೆ. 2000-2500 ಮಂದಿ ಪಂಚಾಯತ್ ನೌಕರರಿದ್ದಾರೆ. ಅವರೆಲ್ಲರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತಿಗಳ ಸಹಕಾರದೊಂದಿಗೆ ಹೊಂಬೆಳಕು ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ“ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಸಂಘಟನೆಯ ಅಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕಳೆದ ಬಾರಿ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆದಿದ್ದ ಮೊದಲನೇ ಆವೃತ್ತಿಯ ಕಾರ್ಯಕ್ರಮದಲ್ಲಿ 6000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿತ್ತು. ಹೀಗಾಗಿ ಮತ್ತದೇ ಉತ್ಸಾಹದಿಂದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರಲು ಒಪ್ಪಿಗೆ ಸೂಚಿಸಿದ್ದಾರೆ. ಅಧಿಕಾರಿಗಳನ್ನು ಹಾಗೂ ಪಕ್ಷ ಬೇಧವಿಲ್ಲದೆ ಎಲ್ಲ ಜನಪ್ರತಿನಿಧಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ಗ್ರಾಮ ಪಂಚಾಯತ್ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಜನರಿಗೆ ಬಹಳಷ್ಟು ಹತ್ತಿರವಾಗಿರುವವರು. ಅವರನ್ನು ರಿಲ್ಯಾಕ್ಸ್ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಶಿಸ್ತುಬದ್ಧ ಪ್ರಥಮ ತಂಡಕ್ಕೆ 50,000 ರೂ., ದ್ವಿತೀಯ 25,000 ರೂ. ಬಹುಮಾನ ನೀಡಲಾಗುವುದು. ಪಥ ಸಂಚಲನಕ್ಕೆ ನನ್ನ ಕನಸಿನ ಭಾರತ, ಗ್ರಾಮ ಸ್ವರಾಜ್ಯ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಥೀಮ್ ಅನ್ನು ನೀಡಲಾಗಿದೆ. ವಾಲಿಬಾಲ್, ಉಪ್ಪಿನ ಮೂಟೆ, ಲಿಂಬೆ ಚಮಚ ಇತ್ಯಾದಿ ಕ್ರೀಡೆಗಳ ಜೊತೆಗೆ ದೇಶಭಕ್ತಿಗೀತೆ, ಸಮೂಹ ನೃತ್ಯ, ಜಾನಪದ ನೃತ್ಯ ಇತ್ಯಾದಿ ಸ್ಪರ್ಧೆ ಇರಲಿದೆ. ಪ್ರತೀ ತಾಲೂಕಿನ ಉತ್ತಮ ಗ್ರಾಮ ಪಂಚಾಯತ್ ಗೆ ಪುರಸ್ಕಾರ ನೀಡಲಾಗುವುದು. ಕ್ರೀಡಾಳುಗಳಿಗೆ ಟಿ ಶರ್ಟ್, ಊಟ ಉಪಚಾರ ವ್ಯವಸ್ಥೆ ಇರಲಿದೆ. ಕಳೆದ ಬಾರಿ ಸರಕಾರದಿಂದ 10 ಲಕ್ಷ ರೂ. ಹಣ ಬಂದಿತ್ತು, ಈ ಬಾರಿ ಹೆಚ್ಚಿನ ಅನುದಾನದ ಭರವಸೆ ಇದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಗೌರವ ಸಲಹೆಗಾರ ಹರೀಶ್ ಕುಮಾರ್, ಲಾರೆನ್ಸ್ ಡಿಸೋಜ, ಪ್ರವೀಣ್ ಆಳ್ವ, ಟ್ರಸ್ಟ್ ಸದಸ್ಯ ಅನಿಲ್ ಕುಮಾರ್, ಸುರೇಂದ್ರ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.