ಮಂಗಳೂರು : ಪಡಿತರ ಚೀಟಿಯಿಂದ ಮೃತ ಕುಟುಂಬದ ಸದಸ್ಯರ ಹೆಸರನ್ನು ತೆಗೆದು ಹಾಕುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಪಡಿತರ ಚೀಟಿಯಲ್ಲಿ ಇನ್ನೂ 13,133 ಮಂದಿ ಮೃತರ ಹೆಸರು ಉಳಿದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಮೃತರ ಮರಣ ಪ್ರಮಾಣ ಪತ್ರವನ್ನು ಹಾಜರುಪಡಿಸುವ ಮೂಲಕ ತಕ್ಷಣ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಡಿಸಿ ಸೂಚಿಸಿದ್ದಾರೆ. ಪಡಿತರ ಚೀಟಿಯಲ್ಲಿ ಮೃತರ ಹೆಸರನ್ನು ಮುಂದುವರಿಸುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಬೆಳಕಿಗೆ ಬಂದರೆ ಫಲಾನುಭವಿಗಳು ಅನರ್ಹರಾಗುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


