ಮಂಗಳೂರು : ಜೆಪ್ಪು ಬಳಿ ನಿರ್ಮಾಣ ಹಂತದ ರೈಲ್ವೆ ಕೆಳ ಸೇತುವೆ ಸೋಮವಾರ ಸಂಜೆ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ 5.30ರ ಸುಮಾರಿಗೆ ಸೇತುವೆಯ ಸ್ಲ್ಯಾಬ್ ಕಾಮಗಾರಿ ನಡೆಯುತ್ತಿದ್ದ ವೇಳೆ ಒಂದು ಭಾಗ ಕುಸಿದಿದೆ. ಸ್ಥಳದಲ್ಲಿ ಸುಮಾರು 12 ಕಾರ್ಮಿಕರು ಇದ್ದರು. ಮೂವರು ಗಾಯಗೊಂಡಿದ್ದರೆ ಉಳಿದ ಕಾರ್ಮಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಸ್ಲ್ಯಾಬ್ ಮೇಲೆ 11ನೇ ಲೋಡ್ ಕಾಂಕ್ರೀಟ್ ಹಾಕುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಳೆದ ಆರು ತಿಂಗಳಿನಿಂದ ಕಾಮಗಾರಿಗಳು ನಡೆಯುತ್ತಿವೆ.
ಗುತ್ತಿಗೆ ಕಂಪನಿ ಮುಂಬೈ ಮೂಲದ ವಿಜಯ್ ಇನ್ಫ್ರಾ ಪ್ರಾಜೆಕ್ಟ್ ಆಗಿದ್ದು, ಯೋಜನಾ ವೆಚ್ಚ 50 ಕೋಟಿ ರೂ. ಇದೇ ಕಂಪನಿ ಪಡೀಲ್ ಅಂಡರ್ ಪಾಸ್ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು.


