ಮಂಗಳೂರು : “ನವೀಕೃತ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಅನ್ನು ನ.18ರಂದು ಮಂಗಳೂರಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಇವರು ಮಂಗಳೂರು ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರ ಎಂಬುದಾಗಿ ಘೋಷಿಸುವರು“ ಎಂದು ಪ್ರಧಾನ ಧರ್ಮಗುರುಗಳಾದ ವಂ ಆ್ಯಂಡ್ರೂ ಲಿಯೋ ಡಿ’ಸೋಜಾ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಉದ್ಘಾಟನೆ ಕಾರ್ಯಕ್ರಮವು ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಗುವುದು. ಸಾಯಂಕಾಲ 5.30 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿರುವುದು. ಈ ಸಂದರ್ಭದಲ್ಲಿ ರಾಜ್ಯದ ಮುಖಂಡರು ಮತ್ತು ಸಮಾಜದ ಗಣ್ಯರು ಉಪಸ್ಥಿತಲಿರುವರು. ನವೆಂಬರ್ 18 ರಂದು ಸಂತ ಲಾರೆನ್ಸರ ಚರ್ಚ್‌ನ ಶತಮಾನೋತ್ಸವ ಸಮಾರೋಪ, ನವೀಕೃತ ಚರ್ಚ್‌ನ ಉದ್ಘಾಟನೆ, ಆಶೀರ್ವಚನ ಹಾಗೂ ಸಂತ ಲಾರೆನ್ನರ ಅಧಿಕೃತ ಪುಣ್ಯಕ್ಷೇತ್ರ ಉದ್ಘಾಟನೆ ಹಾಗೂ ಆಶೀರ್ವಚನ ಬಳಿಕ ಬಲಿಪೂಜೆ ಈ ತ್ರಿವಳಿ ಸಂಭ್ರಮಗಳು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ, ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಹಾಗೂ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಇವರ ಮುಂದಾಳತ್ವದಲ್ಲಿ ನೆರವೇರಲಿದೆ“ ಎಂದರು.
ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುವ ಬೊಂದೆಲ್ ಎಂಬಲ್ಲಿ ರಸ್ತೆಯ ಬಲ ಪಾರ್ಶ್ವದಲ್ಲಿ ಇರುವ ಸಂತ ಲಾರೆನ್ನರ ಸುಂದರ ದೇವಾಲಯ ಹಾಗೂ ಪುಣ್ಯಕ್ಷೇತ್ರ ಹಲವಾರು ಭಕ್ತಾಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈಗಾಗಲೇ ನೂರು ಸಂವತ್ಸರಗಳನ್ನು ಪೂರೈಸಿದ ಈ ಚರ್ಚ್ ಹಾಗೂ ಪಣ್ಯಕ್ಷೇತ್ರಕ್ಕೆ ಇದೀಗ ತ್ರಿವಳಿ ಸಂಭ್ರಮದಲ್ಲಿದೆ.
ಹಿನ್ನೆಲೆ:
ಶತಮಾನದ ಹಿಂದೆ ಭಾರತಕ್ಕೆ ಆಗಮಿಸಿದ ಫ್ರೆಂಚ್ ಧರ್ಮಗುರು ವಂ ಅಲೆಕ್ಸಾಂಡರ್ ದುಬೋಯ್ಸ್ ಇವರು ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಅವರ ಮಾತೃಭಾಷೆ ಫ್ರೆಂಚ್‌ನಲ್ಲಿ ಬೊನ್‌ವೆಲ್’ (ಅತೀ ಸುಂದರ) ಎಂದು ಪ್ರಶಂಸಿಸಿದ ಉದ್ಘಾರವೇ ಕಾಲಕ್ರಮೇಣ ಬೊಂದೆಲ್’ ಎಂಬ ಹೆಸರಿಗೆ ಕಾರಣವಾಯಿತು ಎನ್ನುವುದು ಪ್ರತೀತಿ. 1923ರ ತನಕ ಬೊಂದೆಲ್ ಒಂದು ಸ್ವತಂತ್ರ ಚರ್ಚ್ ಆಗಿರಲಿಲ್ಲ. ಅಂದಿನ ದಿನಗಳಲ್ಲಿ ಈ ಪ್ರದೇಶದ ಕ್ರೈಸ್ತ ಬಾಂಧವರು ತಮ್ಮ ಧಾರ್ಮಿಕ ಸೇವಾ ಸಂಸ್ಕಾರಗಳಿಗಾಗಿ ಏಳೆಂಟು ಮೈಲುಗಳ ದೂರದ ಮಿಲಾಗ್ರಿಸ್ ಮತ್ತು ರೊಜಾರಿಯೋ ಚರ್ಚ್‌ಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು.
ಕ್ರೈಸ್ತ ಬಾಂಧವರ ಈ ಕಷ್ಟವನ್ನರಿತ ಮಿಲಾಗ್ರಿಸ್ ಚರ್ಚ್ ಅಂದಿನ ಧರ್ಮಗುರು ವಂ| ಲುವಿಸ್ ಫೆರ್ನಾಂಡಿಸ್ ಅವರು ಪಚ್ಚನಾಡಿ ಗ್ರಾಮದ ಬಂಗೇರ ಸೀಮೆಯ ತೋಟದಲ್ಲಿ ಒಂದು ಪ್ರಾರ್ಥನಾಲಯ ನಿರ್ಮಿಸಿದರು.
1908ರಲ್ಲಿ ಸ್ಥಾಪನೆಯಾದ ಒಂದು ಶಾಲೆಯು ಆ ಜಾಗದಲ್ಲಿ ಇತ್ತು. ಮಿಲಾಗ್ರಿಸ್ ಚರ್ಚ್‌ನ ಇನ್ನೋರ್ವ ಧರ್ಮಗುರು ವಂ ಫ್ರಾಂಕ್ ಪಿರೇರಾ ಅವರು ಶನಿವಾರದಂದು ಈ ಪ್ರಾರ್ಥನಾಲಯಕ್ಕೆ ಆಗಮಿಸಿ ರವಿವಾರದ ಬಲಿಪೂಜೆ ಹಾಗೂ ಇತರ ಸಂಸ್ಕಾರಗಳನ್ನು ನೆರವೇರಿಸುತ್ತಿದ್ದರು.
ಕ್ರಮೇಣ 1913ರಲ್ಲಿ ಅವರು ಈ ಪ್ರಾರ್ಥನಾಲಯವನ್ನು ಶಾಲೆಯ ಸಮೇತ ಪ್ರಸ್ತುತ ಚರ್ಚ್ ಇರುವ ಜಾಗಕ್ಕೆ ಸ್ಥಳಾಂತರಿಸಿದರು. ಬಲಿಪೂಜೆಅರ್ಪಿಸಲು ಒಂದು ತಾತ್ಕಾಲಿಕ ಮುಳಿಹುಲ್ಲಿನ ಛಾವಣಿಯನ್ನು ನಿರ್ಮಿಸಿದರು ಹಾಗೂ ಶಾಲೆಗೆ ಒಂದು ಕಟ್ಟಡವನ್ನು ಕಟ್ಟಲು ಆರಂಭಿಸಿದರು. ಜನರ ನೆರವಿನಿಂದ 1915ರಲ್ಲಿ ಹೊಸ ಪ್ರಾರ್ಥನಾಲಯ ನಿರ್ಮಾಣವಾಯಿತು. 1917ರಲ್ಲಿ ಪ್ರಭಾರ ಧರ್ಮಗುರುಗಳಾಗಿ ನಿಯುಕ್ತಿಗೊಂಡ ವಂ। ಜುಲಿಯಾನ್ ಡಿ’ಸೋಜಾ ಇವರು 1922ರಲ್ಲಿ ಮಿಲಾಗ್ರಿಸ್ ಚರ್ಚ್ ಸಹಕಾರದಿಂದ ಚಿಕ್ಕದಾಗಿದ್ದ ಬೊಂದೆಲ್ ದೇವಾಲಯದ ಕಟ್ಟಡವನ್ನು ದೊಡ್ಡದಾಗಿ ಕಟ್ಟಿಸಿದರು.
1923 ರಲ್ಲಿ ಅಂದಿನ ಬಿಷಪ್ ಅತೀ ವಂದನೀಯ ಪಾವ್ ಪೆರಿನಿ ಅವರು ಬೊಂದೆಲ್‌ನಲ್ಲಿ ಆದ ಪ್ರಗತಿಯನ್ನು ಗಮಿನಿಸಿ 1923, ಮೇ 1 ರಂದು ಬೊಂದೆಲ್ ಒಂದು ಅಧಿಕೃತ ಚರ್ಚ್ ಎಂದು ಪ್ರಕಟಿಸಿ ಈ ದೇವಮಂದಿರವನ್ನು ಸಂತ ಲಾರೆನ್ನರಿಗೆ ಸಮರ್ಪಿಸಿದರು ಹಾಗೂ ವಂ। ಫ್ರಾಂಕ್ ಪಿರೇರಾ ಇವರನ್ನು ಇಲ್ಲಿನ ಪ್ರಥಮ ಧರ್ಮಗುರುಗಳನ್ನಾಗಿ ನೇಮಿಸಿದರು.
ಅಂದು ಕ್ರೈಸ್ತ ಬಾಂಧವರ ಏಕತೆಯಿಂದ ಆರಂಭಗೊಂಡ ಈ ಚರ್ಚ್‌ನ ಯಶಸ್ವಿ ಬೆಳವಣಿಗೆಗಾಗಿ ಇದುವರೆಗೆ 12 ಪ್ರಧಾನ ಧರ್ಮಗುರುಗಳು ಹಾಗೂ ಅನೇಕ ಸಹಾಯಕ ಧರ್ಮಗುರುಗಳು ತಮ್ಮ ನಿಸ್ವಾರ್ಥ ಸೇವೆಯನ್ನು ಧಾರೆ ಎರೆದಿದ್ದಾರೆ. ಪ್ರಸ್ತುತ ವಂ। ಆ್ಯಂಡ್ರ ಲಿಯೋ ಡಿಸೋಜಾ ಅವರು ಪ್ರಧಾನ ಧರ್ಮಗುರುಗಳಾಗಿ, ವಂ। ವಿಲಿಯಂ ಡಿ’ಸೋಜಾ ಸಹಾಯಕ ಧರ್ಮಗುರುಗಳಾಗಿ ಹಾಗೂ ವಂ। ಪೀಟರ್ ಗೊನ್ಸಾಲ್ವಿಸ್ ಶಾಲಾ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಭಿವೃದ್ಧಿಯ ಅಭಿಯಾನ:
ಕೆಲವೇ ಕ್ರಿಸ್ತ ಕುಟುಂಬಗಳ ಸಮುದಾಯದೊಂದಿಗೆ ಆರಂಭಗೊಂಡ ಈ ದೇವಾಲಯ ಇಂದು ಸುಮಾರು 1200 ಕ್ಕಿಂತ ಹೆಚ್ಚು ಕುಟುಂಬಗಳ ಸಹಯೋಗದೊಂದಿಗೆ ಹೆಮ್ಮರವಾಗಿ ಬೆಳೆದಿದೆ, 36 ವಾರ್ಡ್ಗಳ ಏಕತೆಯೊಂದಿಗೆ ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಈ ದೇವಾಲಯದ, ಚರ್ಚ್ ಆಡಳಿತ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಪಾಲನಾ ಪರಿಷತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಚರ್ಚ್ ವ್ಯಾಪ್ತಿಯ ಧರ್ಮಭಗಿನಿಯರು, ಧರ್ಮಗುರುಗಳು ಹಾಗೂ ಸಮಸ್ತ ಕ್ರೈಸ್ತ ಬಾಂಧವರ ನಿಸ್ವಾರ್ಥ ಸೇವೆಯಿಂದ ಈ ಕೇಂದ್ರವು ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಚರ್ಚ್ ಅಧೀನದಲ್ಲಿ ಸಂತ ಲಾರೆನ್ನರ ಹಿರಿಯ ಪ್ರಾಥಮಿಕ ಶಾಲೆ, ಸಂತ ಲಾರೆನ್ಸ್ ಇಂಗ್ಲೀಷ್ ಮೀಡಿಯಂ ನರ್ಸರಿ, ಪ್ರೈಮರಿ ಹಾಗೂ ಶಾಲೆ ಕೂಡಾ ಇದೆ. ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಶಾಲೆಗೆ 16 ವರ್ಷಗಳ ಇತಿಹಾಸವಿದೆ.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ವಿಲಿಯಂ ಡಿ’ಸೋಜಾ, ಸಂತ ಲಾರೆನ್ಸ್ ಶಾಲೆ ಪ್ರಾಂಶುಪಾಲ ಪೀಟರ್ ಗೊನ್ಸಾಲ್ವಿಸ್, ಉಪಾಧ್ಯಕ್ಷ ಜಾನ್ ಡಿ’ಸಿಲ್ವಾ, ಪ್ರಕಾಶ್ ಪಿಂಟೊ, ಮೇರಿ ಮಿರಾಂದಾ, ಸಂಯೋಜಕಿ ಪ್ರೀತಿ ಡಿ’ಸೋಜ ಮತ್ತಿತರರು ಉಪಸ್ಥಿತರಿದ್ದರು.