ಮಂಗಳೂರು ; ಕಂಕನಾಡಿಯ ಮಸೀದಿಯ ಹೊರಗಿನ ರಸ್ತೆಯಲ್ಲಿ ಇತ್ತೀಚೆಗೆ ನಮಾಝ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಬಿ ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಸೀದಿಯಲ್ಲಿ ಸ್ಥಳಾವಕಾಶದ ಕೊರತೆಯಿತ್ತು. ರಸ್ತೆಯಲ್ಲಿ ನಮಾಜ್ ಮಾಡಿದ್ರು. ಇದೊಂದು ಅನಗತ್ಯ ವಿಚಾರ. ನಮಗೆ ದೇವರು ಒಬ್ಬನೇ ನಮ್ಮ ದೇವರು ಬೇರೆ ಅಲ್ಲ, ನಿಮ್ಮ ದೇವರು ಬೇರೆಯಲ್ಲ ಎಂದು ಮಾಜಿ ಸಚಿವ ರಾಮನಾಥ್ ರೈ ತಿಳಿಸಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಕಾರ್ಯಕ್ರಮಗಳು ನಡೆಯುತ್ತವೆ. ಸಣ್ಣ ಸಮಸ್ಯೆಯನ್ನು ಇಷ್ಟೊಂದು ರಂಪಾಟ ಮಾಡಿದ್ದು ಸರಿಯಲ್ಲ. ಅಲ್ಪಸಂಖ್ಯಾತ ಮತೀಯವಾದ ಬಹುಸಂಖ್ಯಾತ ಮತೀಯವಾದವನ್ನು ಕಾಂಗ್ರೆಸ್ ಒಪ್ಪಲ್ಲ. ಏನೋ ಒಂದು ಗಳಿಗೆಯಲ್ಲಿ ಈ ಘಟನೆ ನಡೆದುಹೋಗಿದೆ. ಅದನ್ನ ಸರಿ ಮಾಡಿಕೊಂಡು ಪ್ರಕರಣ ರದ್ದುಗೊಳಿಸುವುದನ್ನ ಮಾಡಲಾಗಿದೆ. ಈ ಹಿಂದೆಯೂ ಈ ರೀತಿ ಸುಮೊಟೊ ಪ್ರಕರಣ ಆಗಿಲ್ಲ. ಇದಕ್ಕಿಂತ ದೊಡ್ಡ ಪ್ರಚೋದನಕಾರಿ ಮಾತುಗಳನ್ನು ಈ ಜಿಲ್ಲೆಯಲ್ಲಿ ಮಾತನಾಡಿದ್ದಾರೆ. ಮಸೀದಿಯಲ್ಲಿ ಜಾಗ ಇಲ್ಲದಾಗ ಹೊರಗೆ ಬರುವುದು ಸಹಜ ಇದನ್ನ ದೊಡ್ಡದು ಮಾಡಬಾರದು. ಆದರೆ ಮತೀಯ ಸಾಮರಸ್ಯಕ್ಕೆ ತೊಂದರೆಯಾಗಿ ಘರ್ಷಣೆ ಆಗಬೇಕೆಂದು ಈ ರೀತಿ ಮಾಡಲಾಗಿದೆ ಎಂದರು.
ರಸ್ತೆಯಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಕಾರ್ಯಕ್ರಮಗಳು ನಡೆದಿರುವ ನಿದರ್ಶನಗಳಿವೆ. “ಎಲ್ಲವನ್ನೂ ತಪ್ಪು ಎಂದು ಕರೆಯಲಾಗುವುದಿಲ್ಲ. ಪ್ರಚೋದನಕಾರಿ ಭಾಷಣ ಮಾಡಿದರೂ ಜಿಲ್ಲೆಯಲ್ಲಿ ಯಾವುದೇ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿಲ್ಲ,” ಎಂದು ಹೇಳಿದ ಅವರು, ಘಟನೆಯನ್ನು ವಿಡಿಯೋ ಮಾಡಿ ಕೋಮು ಸೌಹಾರ್ದತೆಗೆ ಭಂಗ ತರಲು ಯತ್ನಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.


