ಮಂಗಳೂರು ; ನಗರದಲ್ಲಿ ನಡೆಯುತ್ತಿರುವ ಬೃಹತ್ ಕಟ್ಟಡ ನಿರ್ಮಾಣ ಕಾಮಗಾರಿಯಿಂದ ನಗರವಿಡಿ ದೂಳು ಮಯವಾಗುತ್ತಿದೆ. ನಗರದ ಎಂಜಿ ರಸ್ತೆಯ ಕೋಡಿಯಾಲಗುತ್ತಿನಲ್ಲಿ ನಡೆಯುತ್ತಿರುವ ನಾರ್ಥನ್ ಸ್ಕೈ ಅವರ ಕಾಮಗಾರಿಯಿಂದ ದೂಳು ಊರಿಡಿ ಹರಡುತ್ತಿದೆ. ಹತ್ತು ಚಕ್ರದ ವಾಹನದಲ್ಲಿ ಮಣ್ಣುಗಳ ಸಾಗಾಟ ಮಾಡುತ್ತಿರುವ ಕಾರಣ ರಸ್ತೆಯಲ್ಲಿ ಮಣ್ಣು ಬಿದ್ದು ದೂಳು ಮೇಲೆಳುತ್ತಿದೆ. ಹೆಚ್ಚಿನ ವಾಹನ ದಟ್ಟಣೆ ಇರುವ ಈ ಪ್ರದೇಶದಲ್ಲಿ ಲಾರಿಗಳ ಓಡಾಟದಿಂದ ಒಂದೆಡೆ ಟ್ರಾಫಿಕ್ ಜಾಂ ಕೂಡಾ ಆಗುತ್ತಿದ್ದು, ಮತ್ತೊಂದೆಡೆ ಇಡೀ ಪ್ರದೇಶದಲ್ಲಿ ದೂಳು ತುಂಬಿಕೊಳ್ಳುತ್ತಿದೆ. ಸರಿಯಾದ ರೀತಿಯಲ್ಲಿ ಮಣ್ಣು ಸಾಗಾಟ ಮಾಡದೆ ಬೇಕಾಬಿಟ್ಟಿಯಾಗಿ ನಡೆಯುತ್ತಿರುವ ಲಾರಿ ಓಡಾಟದಿಂದ ಈ ಅವಾಂತರ ಸೃಷ್ಟಿಯಾಗಿದೆ.




ಇನ್ನು ಕೋಡಿಯಾಲ ಗುತ್ತಿನ ರಸ್ತೆಯಲ್ಲಿನ ನಿವಾಸಿಗಳು ಕೂಡಾ ಈ ಕಾಮಗಾರಿಯಿಂದ ಬೇಸತ್ತು ಹೋಗಿದ್ದಾರೆ. ಅಗಲ ಕಿರಿದಾದ ರಸ್ತೆಯಲ್ಲಿ ನಾರ್ಥನ್ ಸ್ಕೈ ಅವರಿಗೆ ಸೇರಿದ ಭಾರಿ ಗಾತ್ರದ ಲಾರಿಗಳ ಓಡಾಟ ಎಲ್ಲೆ ಮೀರಿದ್ದು, ರಸ್ತೆಗೆ ಮಕ್ಕಳನ್ನು ಬಿಡಲು ನಿವಾಸಿಗಳು ಭಯ ಪಡುವಂತಾಗಿದೆ. ಇದೀಗ ಪರೀಕ್ಷಾ ಸಮಯವಾಗಿದ್ದು, ಮಕ್ಕಳು ಮನೆಯಿಂದ ಹೊರ ಬಾರದೆ ಓದಿನಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಮಕ್ಕಳು ಪರೀಕ್ಷೆ ಮುಗಿದ ಬಳಿಕ ಏನೇನೋ ಕಾರಣಗಳಿಂದ ಮನೆಯಿಂದ ಹೊರಗೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಈ ಲಾರಿಗಳ ಓಡಾಟ ಹಾಗೂ ಇದರಲ್ಲಿ ಸಾಗಾಟ ಮಾಡುವ ಮಣ್ಣಿನಿಂದ ಏಳುವ ದೂಳಿನಿಂದ ಮಕ್ಕಳ ಆರೋಗ್ಯಕ್ಕೂ ಸಂಚಕಾರ ಬರುವ ಆತಂಕ ಇದೆ. ಇನ್ನು ಈ ಪ್ರದೇಶದಲ್ಲಿ ವಾಹನ ನಿಯಂತ್ರಣ ಮಾಡಲು ನಿಲ್ಲುವ ಟ್ರಾಫಿಕ್ ಪೊಲೀಸರ ಕಥೆಯಂತು ಕೇಳೋದೆ ಬೇಡ ಎಂಬಂತಾಗಿದೆ.
ಕರ್ತವ್ಯ ನಿರ್ವಹಿಸಲು ಹೆಣಗಾಡುವ ಪೊಲೀಸರು ದೂಳಿನಲ್ಲೇ ದಿನ ಕಳೆಯುವಂತಾಗಿದೆ. ಇಷ್ಟಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಈ ಕಾಮಗಾರಿಯ ಬಗ್ಗೆ ಚಕಾರವೆತ್ತಿಲ್ಲ. ಕಾಮಗಾರಿ ನಡೆಯುವಾಗ ಇದೆಲ್ಲಾ ಸಹಜವಾಗಿದ್ರೂ ಕನಿಷ್ಟ ಮುಂಜಾಗ್ರತೆಯನ್ನು ವಹಿಸದೇ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಹೀಗಾಗಿ ಕಾಮಗಾರಿ ನಡೆಸುತ್ತಿರುವ ನಾರ್ಥನ್ ಸ್ಕೈ ಬಿಲ್ಡರ್ಸ್ ಗಳಿಗೆ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯ ಇದೆ. ಅಷ್ಟೇ ಅಲ್ಲದೆ ಕಾನೂನು ಮೀರಿದ್ರೆ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಅಗತ್ಯ ಕುಡಾ ಇದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.


