ಮಂಗಳೂರು : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿವಾದಾತ್ಮಕ ದೂರು ಸಲ್ಲಿಕೆಯಾಗಿದೆ. ಸೌಜನ್ಯ ಹಾಗೂ ಅವರ ತಾಯಿ ಎಂದು ಗುರುತಿಸಲಾಗಿರುವ ಕುಸುಮಾವತಿ ನಡುವಿನ ಸಂಬಂಧದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ, ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಅವರು ಮಂಗಳೂರಿನ ಎಸ್ಐಟಿ ಕಚೇರಿಗೆ ಹಲವು ಪುಟಗಳ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ.

ಸೌಜನ್ಯ ಮತ್ತು ಅವರ ಸಹೋದರಿ ಸೌಮ್ಯ ಅವರು ಕುಸುಮಾವತಿಯವರ ಹೆತ್ತ ಮಕ್ಕಳೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಿಶೋರ್, ಈ ಕುರಿತು ಜನನ ನೋಂದಣಿ, ಆಸ್ಪತ್ರೆ ದಾಖಲೆಗಳು, ಶಾಲಾ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ.
ಜಮೀನು ಮಂಜೂರಾತಿ ವಿಚಾರವೂ ದೂರಿನಲ್ಲಿ ಉಲ್ಲೇಖ
2015ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಇಂದಿರಾವತಿ ಕೋಂ ಚಂದ್ರಪ್ಪ ಗೌಡ ಎಂಬವರಿಗೆ ಜಮೀನು ಮಂಜೂರಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಈ ಜಮೀನು ಕುಸುಮಾವತಿ ಅವರ ಹೆಸರಿನಲ್ಲಿ ಸ್ವಾಧೀನದಲ್ಲಿರುವ ಬಗ್ಗೆ ದಾಖಲೆಗಳಿವೆ ಎಂದು ಕಿಶೋರ್ ತಿಳಿಸಿದ್ದಾರೆ.
ಆದರೆ, ಇಂದಿರಾವತಿ ಎಂಬ ಮಹಿಳೆ ಪಾಂಗಳ ಗ್ರಾಮದಲ್ಲಿ ವಾಸವಾಗಿರಲಿಲ್ಲ ಎಂಬುದು ತಮ್ಮ ದೂರಿನ ಪ್ರಮುಖ ಅಂಶ ಎಂದು ಅವರು ಉಲ್ಲೇಖಿಸಿದ್ದಾರೆ. ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂದು ಸಲ್ಲಿಸಿರುವ ಪ್ರಮಾಣಪತ್ರದ ಸತ್ಯಾಸತ್ಯತೆಯ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ಎಸ್ಐಟಿ ರಚನೆಯಾಗುವ ಮೊದಲೇ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾಗಿ ಕಿಶೋರ್ ತಿಳಿಸಿದ್ದಾರೆ.
ಆಧಾರ್, ಪಡಿತರ ಚೀಟಿ ಸೇರಿದಂತೆ ಹಲವು ದಾಖಲೆಗಳ ಪರಿಶೀಲನೆಗೆ ಮನವಿ
ಆಧಾರ್ ದಾಖಲೆಗಳು, ಪಡಿತರ ಚೀಟಿ, ಮತದಾರರ ಪಟ್ಟಿ ಹಾಗೂ ಜನನ-ಮರಣ ನೋಂದಣಿಗಳಲ್ಲಿ ವ್ಯತ್ಯಾಸಗಳಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ, ಸರಕಾರಿ ದಾಖಲೆಗಳಲ್ಲಿರುವ ಮಾಹಿತಿಯನ್ನು ಮೂಲ ದಾಖಲೆಗಳೊಂದಿಗೆ ತಾಳೆ ನೋಡಬೇಕೆಂದು ಮನವಿ ಮಾಡಲಾಗಿದೆ.
ಅಲ್ಲದೆ, ಚಂದ್ರಪ್ಪ ಗೌಡರ ಕುಟುಂಬದ ವಂಶವೃಕ್ಷ, ಪತ್ನಿಯರ ವಿವರ, ಪಾರಂಪರಿಕ ಹಕ್ಕುಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತೆಯೂ ಕಿಶೋರ್ ಕೋರಿದ್ದಾರೆ.
ಸೌಜನ್ಯ ಸಾವಿನ ಹಿಂದಿನ ಕಾರಣದ ಬಗ್ಗೆಯೂ ತನಿಖೆಗೆ ಆಗ್ರಹ
ಸೌಜನ್ಯ ಅವರ ನಿಜವಾದ ತಾಯಿ ಯಾರು ಎಂಬುದರ ಬಗ್ಗೆ ಜನನ ನೋಂದಣಿ, ಆಸ್ಪತ್ರೆ ಮತ್ತು ಶಾಲಾ ದಾಖಲೆಗಳ ಮೂಲಕ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಕಾನೂನುಬದ್ಧ ವೈಜ್ಞಾನಿಕ ಪರೀಕ್ಷೆಯ ಸಾಧ್ಯತೆಯನ್ನೂ ಪರಿಶೀಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಕುಸುಮಾವತಿಯವರನ್ನು ವಿಚಾರಣೆಗೆ ಒಳಪಡಿಸಿ, ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಕೋರಿರುವ ಕಿಶೋರ್, ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಸೌಜನ್ಯ ಅವರ ಮಾವ ವಿಠಲ ಗೌಡ ಅವರ ಬಗ್ಗೆಯೂ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಎಸ್ಐಟಿ ತನಿಖೆಯತ್ತ ಗಮನ
ದಾಖಲೆಗಳಲ್ಲಿನ ವ್ಯತ್ಯಾಸಗಳು, ಗುರುತಿನ ವಂಚನೆ ಹಾಗೂ ಸುಳ್ಳು ಪ್ರಮಾಣಪತ್ರಗಳಿಗೆ ಸಂಬಂಧಿಸಿದ ಆರೋಪಗಳು ಸಾಬೀತಾದಲ್ಲಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಿಶೋರ್ ಮನವಿ ಮಾಡಿದ್ದಾರೆ.

