ಮಂಗಳೂರು : ಧರ್ಮಸ್ಥಳದ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಪೊಲೀಸ್ ಠಾಣೆ ಮೊ.ಸಂ. 39/2025 ಕಲಂ 211(ಎ), ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು ಬಿ.ಎನ್.ಎಸ್. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ಕೈಗೊಳ್ಳಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿತು. ಈ ಹಿನ್ನೆಲೆ ಪ್ರಕರಣದ ತನಿಖೆಯನ್ನು ಸರಕಾರ ಎಸ್.ಐ .ಟಿ ಗೆ ವಹಿಸಿತ್ತು.
ಬಳಿಕ ದೂರುದಾರ ಅನಾಮಿಕನ ದೂರಿನಂತೆ 13 ದಿನಗಳ ವರೆಗೆ ತಾನು ಗುರುತಿಸಿಕೊಂಡ ಜಗದಲ್ಲಿ ಎಸ್.ಐ .ಟಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉತ್ಖನನ ಪ್ರಾರಂಭಿಸಿದ್ದರು .ಆದರೆ ಅನಾಮಿಕನ ದೂರಿನಂತೆ ಅಲ್ಲಿ ಸರಿಯಾದ ಸಾಕ್ಷಿಗಳು ಸಿಗದ ಕಾರಣ ಹಿನ್ನಡೆ ಪಡೆದಂತಾಗಿದೆ.ಇದೀಗ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಉತ್ಖನನವನ್ನು ಸ್ಥಗಿತಗೊಳಿಸಲಾಗಿದ್ದು, ಅನಾಮಿಕ ದೂರುದಾರನನ್ನು ಎಸ್ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಸುಳ್ಳು ದೂರು ನೀಡಿದ ಅನುಮಾನದ ಮೇಲೆ ಎಸ್ಐಟಿ ಕೋರ್ಟ್ಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ನೀಡಿರುವ ದೂರಿನಂತೆ ನಡೆಸಲಾಗುತ್ತಿದ್ದ ಉತ್ಖನನವನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ ಸೋಮವಾರ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಎಸ್ಐಟಿ ಅನಾಮಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ದೂರಿನ ಮೇಲೆಯೇ ಸದ್ಯ ಅನುಮಾನ ವ್ಯಕ್ತವಾದ ಕಾರಣ ಆತನನ್ನು ವಶಕ್ಕೆ ಪಡೆಯಲು ಎಸ್ಐಟಿ ಚಿಂತನೆ ನಡೆಸಿದೆ.ಆತನನ್ನು ಸುಪರ್ದಿಗೆ ಪಡೆದು ವಿಚಾರಣೆಗೆ ಒಳಪಡಿಸಿದರೆ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆ ಇರುವುದರಿಂದ ಈ ಕ್ರಮಕ್ಕೆ ಎಸ್ಐಟಿ ಮುಂದಾಗಿದೆ ಎನ್ನಲಾಗಿದೆ.
ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಆತ ರಕ್ಷಣೆಯಲ್ಲಿದ್ದಾನೆ. ಇದರಿಂದಾಗಿ ಆತನನ್ನು ವಶಕ್ಕೆ ಪಡೆಯುವುದು ಅಥವಾ ಬಂಧಿಸುವುದು ಸಾಧ್ಯವಿಲ್ಲ.ಕೆಲ ಪ್ರಬಲ ಸಾಕ್ಷ್ಯಗಳ ಮೂಲಕ ಕೋರ್ಟ್ಗೆ ಅರ್ಜಿ ಸಲ್ಲಿಸಲು ಎಸ್ಐಟಿ ಪ್ಲಾನ್ ಮಾಡಿಕೊಂಡಿದ್ದು ಕೆಲವು ಪ್ರಬಲ ವಿಚಾರಗಳನ್ನು ಮುಂದಿಟ್ಟುಕೊಂಡು ಆತನನ್ನು ವಶಕ್ಕೆ ಪಡೆಯಲು ಎಸ್ಐಟಿ ಉದ್ದೇಶಿಸಿದೆ.
ಈ ಬಗ್ಗೆ ಎಸ್ಐಟಿ.ಗೆ ಸುಳ್ಳು ಮಾಹಿತಿ ನೀಡಿದ ಅನುಮಾನವಿದೆ ಎಂದು ಕೋರ್ಟ್ಗೆ ವರದಿ ನೀಡುವ ಸಾಧ್ಯತೆವಿದ್ದು ಸುಳ್ಳು ದೂರು ಅಥವಾ ತನಿಖೆಗೆ ಅಡ್ಡಿ ಆರೋಪಿಸಿ ಬೇರೆ FIR ದಾಖಲಿಸಿ ಬಂಧಿಸಬಹುದು ಆದರೆ ಅದಕ್ಕಿಂತ ಮೊದಲು ನ್ಯಾಯಾಲಯದಿಂದ ಅನಾಮಿಕನ ಬಂಧನಕ್ಕೆ ಅನುಮತಿ ಪಡೆಯಬಹುದು ಎಂಬ ಮಾಹಿತಿ ತಿಳಿದುಬಂದಿದೆ.ಆದರೆ ಎಸ್ಐಟಿ ಗೂ ಕೂಡ ಅನಾಮಿಕ ದೂರುದಾರ ನೀಡಿದ ಮಾಹಿತಿಯು ಸುಳ್ಳು ಎಂದು ಸಾಕ್ಷ್ಯಗಳ ಮೂಲಕ ಸಾಬೀತು ಪಡಿಸುವ ಅಗತ್ಯವಿದ್ದು ಎಸ್ಐಟಿ ಆತನ ವಿರುದ್ಧ ಹೊಸ FIR (BNS 209, 227, 229 ಇತ್ಯಾದಿ ಅಡಿಯಲ್ಲಿ) ದಾಖಲಿಸಬಹುದು ಅಥವಾ ಇದೇ ಸಾಕ್ಷ್ಯಗಳ ಆಧಾರದಲ್ಲಿ ಕೋರ್ಟ್ಗೆ ಅರ್ಜಿ ಸಲ್ಲಿಸಬಹುದು.ಒಟ್ಟಿನಲ್ಲಿ ಧರ್ಮಸ್ಥಳ ನೂರಾರು ಶವ ಹೂತಿಟ್ಟ ಪ್ರಕರಣ ಪೊಲೀಸ್ ಇಲಾಖೆಯನ್ನೇ ತಲೆಕೆಡಿಸಿದಂತಾಗಿದೆ.