ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಆರ್ಭಟ ಮುಂದುವರಿದಿದ್ದು, ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಸುಬ್ರಹ್ಮಣ್ಯ ಹಾಗೂ ಸುಳ್ಯ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.







ನಿರಂತರ ಮಳೆಯಿಂದ ನದಿಗಳಲ್ಲಿ ನೀರಿನ ಹರಿವು ಅಪಾಯದ ಮಟ್ಟಕ್ಕೆ ಏರಿಕೆಯಾಗಿದ್ದು, ಹಲವೆಡೆ ಗುಡ್ಡ ಕುಸಿತ ಹಾಗೂ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳ್ತಂಗಡಿ ತಾಲೂಕಿನ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಮುಂಡಾಜೆ–ಧರ್ಮಸ್ಥಳ ರಸ್ತೆಯಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮುಂಡಾಜೆ ಭಾಗದಲ್ಲಿ ಮಳೆ ನೀರು ಮನೆಗಳು ಹಾಗೂ ತೋಟಗಳಿಗೆ ನುಗ್ಗಿ ಸ್ಥಳೀಯರು ಸಂಕಷ್ಟ ಎದುರಿಸುತ್ತಿದ್ದಾರೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ನದಿಯ ಹರಿವು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಭಕ್ತರು ನದಿಗೆ ಇಳಿಯದಂತೆ ಪೊಲೀಸರು ಹಾಗೂ ದೇವಸ್ಥಾನದ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಇನ್ನೊಂದೆಡೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿಯ ನೀರಿನ ಮಟ್ಟ ಏರಿಕೆಯಿಂದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು, ಭಕ್ತರ ಅನುಕೂಲಕ್ಕಾಗಿ ಡ್ರಮ್‌ಗಳಲ್ಲಿ ಪರ್ಯಾಯ ಸ್ನಾನ ವ್ಯವಸ್ಥೆ ಕಲ್ಪಿಸಲಾಗಿದೆ.
ಭಾರೀ ಮಳೆಯ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈಗಾಗಲೇ ಶಾಲೆ, ಪಿಯುಸಿ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿದೆ. ಸಾರ್ವಜನಿಕರು ನದಿ, ಕೆರೆ, ತಗ್ಗು ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.


