ಮಂಗಳೂರು ; ಶನಿವಾರ ಬೆಳಗ್ಗೆ ದಕ್ಷಿಣ ಕನ್ನಡದ ವಿವಿಧೆಡೆ ಮಳೆ ಮುಂದುವರಿದಿದೆ. ನಗರದ ಪಂಪ್ವೆಲ್ (ಮಹಾವೀರ ಸರ್ಕಲ್) ಮೇಲ್ಸೇತುವೆ, ಕದ್ರಿ, ಬಜ್ಜೋಡಿ, ಕೆಎಸ್ ರಾವ್ ರಸ್ತೆ ಮತ್ತಿತರ ಕಡೆಗಳಲ್ಲಿ ಮಳೆ ನೀರು ರಸ್ತೆಗೆ ನುಗ್ಗಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಐಎಂಡಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಪ್ರತಿಕೂಲ ಹವಾಮಾನದ ಕಾರಣ, ಎರಡು ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ,ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಸ್ವಲ್ಪ ಹೊತ್ತು ಆಕಾಶದಲ್ಲೇ ಹಾರಾಡಿ ನಂತರ ಲ್ಯಾಂಡ್ ಆಗಿದೆ ಎಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ (ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯ) ಕುಂದಾಪುರದ ಪಡುವರಿಯಲ್ಲಿ ಅತಿ ಹೆಚ್ಚು ಮಳೆ-141 ಮಿ.ಮೀ, ಯಡ್ತರೆ-132 ಮಿ.ಮೀ, ಶಿರೂರು-100.5 ಮಿ.ಮೀ, ಉಪ್ಪುಂದ-93.5 ಮಿ.ಮೀ, ಬಳಂಜ-129 ಮಿ.ಮೀ, ಬಾಳ-113 ಮಿ.ಮೀ. ಮಂಡೆಕೋಲು-104.5 ಮಿ.ಮೀ, ಹೊಸಂಗಡಿ-104 ಮಿ.ಮೀ, ಕುಕ್ಕೇಡಿ-102.5 ಮಿ.ಮೀ, ಪಿಲಾತಬೆಟ್ಟು-102 ಮಿ.ಮೀ ಮಳೆಯಾಗಿದೆ.
ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ನಡಾಯಿಪಲ್ಕೆ ಎಂಬಲ್ಲಿ ಶುಕ್ರವಾರ ತಡರಾತ್ರಿ ಹಸು ಹುಡುಕಲು ತೆರಳಿದ್ದ ಮಹಿಳೆಯೊಬ್ಬರು ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ, ಮೃತರು ಬೇಬಿ ಶೆಟ್ಟಿ ಎಂದು ತಿಳಿದಿದೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಜುಲೈ 6 ರಂದು ಸುಳ್ಯದ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂರ್ನಡ್ಕ ಎಂಬಲ್ಲಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ನಾರಾಯಣ ಅಲಿಯಾಸ್ ಬಾಲಕೃಷ್ಣನ ಮೃತದೇಹ ಪತ್ತೆಗೆ ಇನ್ನೂ ಸಾಧ್ಯವಾಗಿಲ್ಲ. ಕಾಞಂಗಾಡ್ ಮೂಲದ ಇವರು ರಬ್ಬರ್ ತೋಟದಲ್ಲಿ ಕೆಲಸ ಮಾಡಲು ಬಂದಿದ್ದರು. ಇಂದು ಕೂಡ ಶೋಧ ಕಾರ್ಯ ಮುಂದುವರೆಯಲಿದೆ.


