ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಳಲ್ಲಿ ರಸ್ತೆಗಳಿಗೆ ನೀರು ನುಗ್ಗಿದ್ದು, ನದಿ ಹಾಗೂ ಹೊಳೆಗಳ ನೀರಿನ ಮಟ್ಟ ಅಪಾಯದ ಮಟ್ಟದತ್ತ ಏರಿಕೆಯಾಗಿದೆ.


ಇದರ ನಡುವೆ, ಬಂಟ್ವಾಳ ತಾಲೂಕಿನ ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡ ದಿನಪೂರ್ತಿ ಶೋಧ ಕಾರ್ಯಾಚರಣೆ ನಡೆಸಿತು. ಆದರೆ ನದಿಯಲ್ಲಿ ಭಾರೀ ನೀರಿನ ಹರಿವು ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ವ್ಯಕ್ತಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.ಸಂಜೆಯ ವೇಳೆಗೆ ಬೆಳಕು ಕಡಿಮೆಯಾಗಿದ್ದು, ನದಿಯಲ್ಲಿನ ಅಪಾಯಕಾರಿ ಹರಿವಿನ ಹಿನ್ನೆಲೆಯಲ್ಲಿ ಇಂದಿನ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೋಮವಾರ (ಆ. 3) ಬೆಳಿಗ್ಗೆ ಮತ್ತೆ NDRF ತಂಡದಿಂದ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನದಿ, ಹೊಳೆ ಹಾಗೂ ತಗ್ಗು ಪ್ರದೇಶಗಳ ಸಮೀಪ ಸಾರ್ವಜನಿಕರು ಅನಗತ್ಯವಾಗಿ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.


