ಮಂಗಳೂರು : ದಕ್ಷಿಣ ಭಾರತದ ಪ್ರಮುಖ ಮಸೀದಿಯೂ ಸರ್ವಧರ್ಮೀಯರು ಪಾಲ್ಗೊಳ್ಳುವ ಸಂದರ್ಶನಾ ಕೇಂದ್ರವಾಗಿರುವ ಅಜಿಲಮೊಗರು ಜುಮಾ ಮಸೀದಿಯ ಸಂಸ್ಥಾಪಕರು ಹಾಗೂ ಪವಾಡ ಪುರುಷರೂ ಆದ ಹಝತ್ ಸಯ್ಯದ್ಬಾಬಾ ಫಕ್ರುದ್ದೀನ್ ವಲಿ (ಖ.ಸಿ) ರವರ ಸ್ಮರಣಾರ್ಥ ವರ್ಷಂಪ್ರತಿ ನಡೆಸಲ್ಪಡುವ ಪ್ರಖ್ಯಾತ 752 ನೇ ಮಾಲಿದಾ ಉರೂಸ್ ಇದೇ ಬರುವ ಡಿಸೆಂಬರ್ 13 ರಿಂದ 17ರ ತನಕ ನಡೆಯಲಿದೆ. ಸರ್ವಧರ್ಮ ಭಾವೈಕ್ಯತೆಯ ತಾಣವಾದ ಇಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಮರ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಮಸೀದಿ ಅಧ್ಯಕ್ಷರಾದ ಹಾಜಿ ಪಿಬಿ ಅಬ್ದುಲ್ ಹಮೀದ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಪ್ರಥಮ ದಿನವಾದ ಡಿಸೆಂಬರ್ 13 ಶುಕ್ರವಾರ ಮಗ್ರಿಬ್ ನಮಾಝಿನ ಬಳಕ ಅಸ್ಸಯ್ಯದ್ ಜಿಲ್‌ಫರ್ ಸ್ವಾದಿಕ್ ತಂಜಳ್, ಕುಂಬೋಳ್ ರವರ ನೇತೃತ್ವದಲ್ಲಿ ಜಲಾಲಿಯ್ಯಃ ರಾತೀಬ್ ನಡೆಯಲಿದ್ದು, ಡಿಸೆಂಬರ್ 14 ಶನಿವಾರ
ಭಂಡಾರದ ಹರಕೆ ಪ್ರಾರಂಭ ಹಾಗೂ ಬುರ್ದಾ ಮಜ್ಲಿಸ್ ನಡೆಯಲಿದ್ದು ಸಂಯ್ಯದ್ ಅಟಕೋಯ ತಂಞಳ್ ಕುಂಬೋಳ್ ರವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಡಿಸೆಂಬರ್ 15 ಆದಿತ್ಯವಾರ ಬೆಳಗ್ಗೆ 8 ರಿಂದ ಊರಪರವೂರ ಮಹನೀಯರ ಕೊಡುವಿಕೆಯಿಂದ ಮಾಲಿದಾ ಹರಕೆ ಪ್ರಾರಂಭವಾಗಲಿದ್ದು, ಮಗ್ರಿಬ್ ನಮಾಝಿನ ಬಳಿಕ ಪ್ರಖ್ಯಾತ
ಪ್ರಭಾಷಣಗಾರ ಮಸ್ ಊದ್ ಸಖಾಫಿ ಗೂಡಲ್ಲೂರ್ ರವರ ಧಾರ್ಮಿಕ ಪ್ರವಚನ ನಡೆಯಲಿದೆ. ಡಿಸೆಂಬರ್ 16 ಸೋಮವಾರ
ಬೆಳಗ್ಗೆ 8 ಕ್ಕೆ ಮಾಲಿದಾ ವಿತರಣೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮಗ್ರಿಬ್ ನಮಾಝಿನ ಬಳಿಕ ಪ್ರಖ್ಯಾತ ಪ್ರಭಾಷಣಗಾರ ಖಲೀಲ್ ಹುದವಿ ಕಾಸರಗೋಡ್ ರವರ ಧಾರ್ಮಿಕ ಪ್ರವಚನ ನಡೆಯಲಿದೆ.
ಸಮಾರೋಪ ಸಮಾರಂಭವಾದ ಡಿಸೆಂಬರ್ 17 ಮಂಗಳವಾರ ಹಗಲು ಸಾಮೂಹಿಕ ಪ್ರಾರ್ಥನೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5ರ ತನಕ ಕಂದೂರಿ ಊಟ ವಿತರಿಸಲ್ಪಡಲಿದ್ದು, ಈ ಐದು ದಿನಗಳಲ್ಲಿ ಪ್ರಖ್ಯಾತ ಸಾದಾತುಗಳು ಹಾಗೂ ಧಾರ್ಮಿಕ ವಿದ್ವಾಂಸರಿಂದ ಝಿಯಾರತ್, ಸಾಮೂಹಿಕ ಪ್ರಾರ್ಥನೆ ಮುಂತಾದವುಗಳು ನಡೆಯಲಿದ್ದು ಸರ್ವ ಧರ್ಮೀಯರಾದ ಲಕ್ಷಾಂತರ ಜನರು ಸೇರಲಿದ್ದಾರೆ ಎಂದರು.
ಬೆಳಗ್ಗೆಯಿಂದ ಸಂಜೆ 6 ಗಂಟೆಯ ತನಕ ಮಾತ್ರ ಸ್ತ್ರೀಯರಿಗೆ ಉರೂಸ್ ನಲ್ಲಿ ಭಾಗವಹಿಸಲು ಅವಕಾಶವಿದ್ದು ಹಾಗೂ ಫ್ಯಾನ್ಸಿ ಟೋಯ್ಸ್ ಗಳ ವ್ಯಾಪಾರವನ್ನೂ ಮನೋರಂಜನಾ ಕಾರ್ಯಕ್ರಮಗಳನ್ನೂ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ 5 ದಿನಗಳ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕಾಗಿ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಎಂ.ಕೆ. ಸಿನಾನ್ ಸಖಾಫಿ, ಪಿಎಸ್ ತ್ವಾಹಾ ಸಅದಿ, ಇಬ್ರಾಹೀಂ ಜಿ. ಅಜಿಲಮೊಗರು, ಅದಂ ಕುಂಞನಡುಮೊಗರು, ಸ್ವಾದಿಕ್ ಇಂಜಿನಿಯರ್, ಇಬ್ರಾಹಿಂ ಗಂಡಿ ಮತ್ತಿತರರು ಉಪಸ್ಥಿತರಿದ್ದರು.