ಮಂಗಳೂರು : ನಗರ ಪೊಲೀಸ್ ವತಿಯಿಂದ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ.


ಜೂನ್ 2026ರಿಂದ ಈವರೆಗೆ ನೋ ಪಾರ್ಕಿಂಗ್, ಫುಟ್ಪಾತ್ ಪಾರ್ಕಿಂಗ್, ಡಬಲ್ ಪಾರ್ಕಿಂಗ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳ 7,490 ಪ್ರಕರಣ ದಾಖಲಾಗಿದ್ದು, 3.07 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ 1,080 ಫುಟ್ಪಾತ್ ಪಾರ್ಕಿಂಗ್ ಪ್ರಕರಣಗಳು ಸೇರಿವೆ.
ಇನ್ನು, ಆಗಸ್ಟ್ 4ರಿಂದ 12ರವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ 258 ವಾಹನಗಳು ಹಾಗೂ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ 74 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು 332 ಪ್ರಕರಣಗಳಲ್ಲಿ 3.01 ಲಕ್ಷ ರೂ. ದಂಡ ವಿಧಿಸಲಾಗಿದೆ.
ನಿಯಮಾನುಸಾರ ಸ್ಪಷ್ಟವಾಗಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. HSRP ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಮಾಲೀಕರು ಆದ್ಯತೆ ನೀಡಬೇಕು ಎಂದು ಮಂಗಳೂರು ನಗರ ಪೊಲೀಸರು ಸೂಚಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ವಿರುದ್ಧದ ಕಾರ್ಯಾಚರಣೆ ಮುಂದೆಯೂ ಮುಂದುವರಿಯಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

