Friday, October 9, 2026
Homeಜಿಲ್ಲೆಮಂಗಳೂರು : ಕೋರಿಯರ್ ಮೂಲಕ MDMA ಸಾಗಾಟಕ್ಕೆ ಸಂಚು; ₹1.63 ಕೋಟಿ ಮೌಲ್ಯದ ಸೊತ್ತು ವಶ,...

ಮಂಗಳೂರು : ಕೋರಿಯರ್ ಮೂಲಕ MDMA ಸಾಗಾಟಕ್ಕೆ ಸಂಚು; ₹1.63 ಕೋಟಿ ಮೌಲ್ಯದ ಸೊತ್ತು ವಶ, ಮೂವರು ಬಂಧನ..!

ಮಂಗಳೂರು: ಕೋರಿಯರ್ ಮೂಲಕ ನಿಷೇಧಿತ ಮಾದಕವಸ್ತು MDMAಯನ್ನು ಮಂಗಳೂರಿಗೆ ಸಾಗಿಸಿ, ಮಂಗಳೂರು ನಗರ ಹಾಗೂ ಕೇರಳದ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 1 ಕೆಜಿ 796.96 ಗ್ರಾಂ MDMA ಸೇರಿದಂತೆ ಒಟ್ಟು ₹1,63,84,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ

ಮಂಗಳೂರು ನಗರದಲ್ಲಿ MDMA ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, 2026ರ ಅಕ್ಟೋಬರ್ 8ರಂದು ರಾತ್ರಿ 10 ಗಂಟೆಗೆ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ₹1 ಕೋಟಿ 58 ಲಕ್ಷದ 34 ಸಾವಿರ ಮೌಲ್ಯದ 1 ಕೆಜಿ 796.96 ಗ್ರಾಂ MDMA ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಮೂರು ಮೊಬೈಲ್ ಫೋನ್‌ಗಳು, ಮಾದಕವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಆಟೋ ರಿಕ್ಷಾ, ಕೋರಿಯರ್ ರಟ್ಟಿನ ಬಾಕ್ಸ್ ಹಾಗೂ ವಾಟರ್ ಪ್ಯೂರಿಫೈಯರ್ ಅನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಅಬ್ದುಲ್ ಹಾಪೀಲ್ (25), ಜಿಯಾವುಲ್ ಹಕ್ (30) ಮತ್ತು ಅಲ್ತಾಫ್ (28) ಎಂದು ಗುರುತಿಸಲಾಗಿದೆ.

ಅಬ್ದುಲ್ ಹಾಪೀಲ್ ಕೇರಳದ ಕಾಸರಗೋಡು ಜಿಲ್ಲೆಯ ಮಂಗಳ್ಪಾಡಿ ನಿವಾಸಿಯಾಗಿದ್ದು, ಜಿಯಾವುಲ್ ಹಕ್ ಮಂಗಳೂರಿನ ಕಸಬಾ ಬೆಂಗ್ರೆ ಪ್ರದೇಶದ ನಿವಾಸಿ. ಅಲ್ತಾಫ್ ಮಂಗಳೂರಿನ ಪಾಂಡೇಶ್ವರದ ಆಯಿಷಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಟರ್ ಪ್ಯೂರಿಫೈಯರ್‌ನಲ್ಲಿ MDMA ಬಚ್ಚಿಟ್ಟು ಸಾಗಾಟಕ್ಕೆ ಸಂಚು

ಆರೋಪಿಗಳು ಪಂಜಾಬ್‌ನ ಅಮೃತಸರದಿಂದ MDMA ಖರೀದಿಸಿ, ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹಿಸುವ ಭಾಗದಲ್ಲಿ ಮಾದಕವಸ್ತುವನ್ನು ಬಚ್ಚಿಟ್ಟು ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಲು ಯೋಜಿಸಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಂತರ ಈ ಮಾದಕವಸ್ತುವನ್ನು ಮಂಗಳೂರು ನಗರ ಹಾಗೂ ಕೇರಳದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಕಾರ್ಯಾಚರಣೆ ಮೂಲಕ ಈ ಜಾಲವನ್ನು ಆರಂಭದಲ್ಲೇ ಪತ್ತೆಹಚ್ಚಿ ತಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಹಿಂದಿನ ಪ್ರಕರಣಗಳ ಉಲ್ಲೇಖ

ಅಬ್ದುಲ್ ಹಾಪೀಲ್ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಿಯಾವುಲ್ ಹಕ್ ದುಬೈನ ರಸ್ ಅಲ್ ಖೈಮಾದಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ಮರಳಿದ್ದಾನೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಅಲ್ತಾಫ್ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular