Saturday, September 19, 2026
Homeಜಿಲ್ಲೆಮಂಗಳೂರು : ಕರಾವಳಿಗೆ ಸಂಪುಟ ಗಿಫ್ಟ್ : ತುಳುವಿಗೆ ಸ್ಥಾನಮಾನ, ಪುತ್ತೂರಿಗೆ ಮೆಡಿಕಲ್ ಕಾಲೇಜು, ಮೀನುಗಾರಿಕೆಗೆ...

ಮಂಗಳೂರು : ಕರಾವಳಿಗೆ ಸಂಪುಟ ಗಿಫ್ಟ್ : ತುಳುವಿಗೆ ಸ್ಥಾನಮಾನ, ಪುತ್ತೂರಿಗೆ ಮೆಡಿಕಲ್ ಕಾಲೇಜು, ಮೀನುಗಾರಿಕೆಗೆ ಭರ್ಜರಿ ಬಲ.

ಮಂಗಳೂರು : ಮಂಗಳೂರಿನ ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿ ‘ಪ್ರಜಾಸೌಧ’ದಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಸೇರಿದಂತೆ ಒಟ್ಟು ₹32,611 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ತುಳುವಿಗೆ ಅಧಿಕೃತ ಸ್ಥಾನಮಾನ
ತುಳು ಭಾಷಿಕರ ದಶಕಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳುವನ್ನು ಅಧಿಕೃತ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಮಾನ್ಯತೆ ನೀಡಲು ನಿರ್ಧರಿಸಿದೆ. ಇದರೊಂದಿಗೆ ಸರಕಾರಿ ಅಧಿಸೂಚನೆಗಳನ್ನು ಕನ್ನಡದ ಜತೆಗೆ ತುಳುವಿನಲ್ಲೂ ಪ್ರಕಟಿಸಲು, ಸರಕಾರಕ್ಕೆ ತುಳುವಿನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಸರಕಾರಿ ಕಚೇರಿ ಮತ್ತು ಸಭೆಗಳಲ್ಲಿ ತುಳುವಿನಲ್ಲಿ ಅಧಿಕೃತವಾಗಿ ಮಾತನಾಡಲು ಅವಕಾಶ ದೊರೆಯಲಿದೆ. ಶಾಲೆಗಳಲ್ಲಿ ತುಳುವನ್ನು ಮೂರನೇ ಭಾಷೆಯಾಗಿ ಕಲಿಸುವುದಕ್ಕೂ ಮತ್ತಷ್ಟು ಅಧಿಕೃತ ಬೆಂಬಲ ದೊರೆಯಲಿದ್ದು, ತುಳು ಅಭಿವೃದ್ಧಿಗೆ ಪ್ರತಿವರ್ಷ ₹82 ಲಕ್ಷ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ.

ಕರಾವಳಿಗೆ ಪ್ರಮುಖ ಕೊಡುಗೆಗಳು
ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗಕ್ಕೆ ಹಲವು

ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಕರಾವಳಿ ವಲಯ ನಿರ್ವಹಣಾ ಯೋಜನೆ–2019ರ ಪರಿಷ್ಕರಣೆಗೆ ಅನುಮೋದನೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರು ಪ್ರಮುಖ ಸೇತುವೆಗಳ ನಿರ್ಮಾಣ

ಪುತ್ತೂರು ತಾಲೂಕಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ₹549.79 ಕೋಟಿ

ಕರಾವಳಿ ಜಿಲ್ಲೆಗಳ ದ್ವೀಪಗಳ ಅಭಿವೃದ್ಧಿ

ಮಂಗಳೂರು ಮೀನುಗಾರಿಕೆ ಕಾಲೇಜನ್ನು ಮೀನುಗಾರಿಕೆ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸುವ ನಿರ್ಧಾರ

ಕರಾವಳಿ ಜಿಲ್ಲೆಗಳ ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿ

ವಿಶೇಷ ಸಮುದ್ರ ವಲಯ ರಚನೆಗೆ ಅಧಿಸೂಚನೆ

ಕದ್ರಿ ಬಳಿ 42 ಮಹಡಿ ಲ್ಯಾಂಡ್‌ಮಾರ್ಕ್ ಟವರ್ ನಿರ್ಮಾಣಕ್ಕೆ ಯೋಜನೆ

ಕರಾವಳಿ–ಮಲೆನಾಡು ಪ್ರವಾಸೋದ್ಯಮ ನೀತಿ–2026ಕ್ಕೆ ಅನುಮೋದನೆ

ದಕ್ಷಿಣ ಕನ್ನಡಕ್ಕೆ ‘ಮಂಗಳೂರು’ ಹೆಸರು?
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ವಿಚಾರಕ್ಕೂ ತಾತ್ವಿಕ ಒಪ್ಪಿಗೆ ದೊರೆತಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಕಾಲ ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಸ್ತೂರಿರಂಗನ್ ವರದಿ : ಭೌತಿಕ ಸಮೀಕ್ಷೆಗೆ ಚಿಂತನೆ
ಕಸ್ತೂರಿರಂಗನ್ ವರದಿ ಬಾಧಿತ ಪ್ರದೇಶಗಳ ಸಮಸ್ಯೆಗಳ ಕುರಿತು ಹೆಬ್ರಿಯಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜನರ ಅಭಿಪ್ರಾಯ ಆಲಿಸಿದ ಬಳಿಕ ಪ್ರತ್ಯೇಕ ಭೌತಿಕ ಸಮೀಕ್ಷೆ ನಡೆಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವುದಾಗಿ ಅವರು ಹೇಳಿದ್ದಾರೆ. ಮಂಗಳೂರು ಸಚಿವ ಸಂಪುಟ ಸಭೆಯ ಮೂಲಕ ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ, ಕರಾವಳಿ ಮೂಲಸೌಕರ್ಯ, ಮೀನುಗಾರಿಕೆ, ಆರೋಗ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹಲವು ಪ್ರಮುಖ ಕೊಡುಗೆಗಳು ಘೋಷಣೆಯಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular