Monday, August 3, 2026
Homeಜಿಲ್ಲೆಮಂಗಳೂರು : ಎರಡು ದಿನಗಳ ಬಳಿಕ ಮಂಗಳೂರು–ಬೆಂಗಳೂರು ರೈಲು ಸಂಚಾರ ಪುನರಾರಂಭ ; ಘಾಟ್ ಮಾರ್ಗದಲ್ಲಿ...

ಮಂಗಳೂರು : ಎರಡು ದಿನಗಳ ಬಳಿಕ ಮಂಗಳೂರು–ಬೆಂಗಳೂರು ರೈಲು ಸಂಚಾರ ಪುನರಾರಂಭ ; ಘಾಟ್ ಮಾರ್ಗದಲ್ಲಿ ಮತ್ತೆ ರೈಲು ಓಟ.

ಮಂಗಳೂರು : ಭಾರೀ ಮಳೆ ಹಾಗೂ ಭೂಕುಸಿತದಿಂದ ಎರಡು ದಿನಗಳ ಕಾಲ ಸ್ಥಗಿತಗೊಂಡಿದ್ದ ಮಂಗಳೂರು–ಬೆಂಗಳೂರು ರೈಲು ಸಂಚಾರ ಸೋಮವಾರ ರಾತ್ರಿ ಪುನರಾರಂಭಗೊಂಡಿದೆ.

ಸುಬ್ರಹ್ಮಣ್ಯ ರಸ್ತೆ–ಸಕಲೇಶಪುರ ಘಾಟ್ ವಿಭಾಗದ ಸಿರಿಬಾಗಿಲು–ಯಡಕುಮಾರಿ ನಡುವೆ ಹಳಿ ಮೇಲಿದ್ದ ಮಣ್ಣು ಹಾಗೂ ಬಂಡೆಗಳನ್ನು ಯುದ್ಧೋಪಾದಿಯಲ್ಲಿ ತೆರವುಗೊಳಿಸಿದ ಬಳಿಕ ದಕ್ಷಿಣ ಪಶ್ಚಿಮ ರೈಲ್ವೆ ಸಂಚಾರಕ್ಕೆ ಅನುಮತಿ ನೀಡಿದೆ.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮುದಿತ್ ಮಿತ್ತಲ್ ಅವರ ಮಾಹಿತಿ ಪ್ರಕಾರ, ಸೋಮವಾರ ಸಂಜೆ 7.25ಕ್ಕೆ ಟ್ರ್ಯಾಕ್ ಫಿಟ್ ಪ್ರಮಾಣಪತ್ರ ನೀಡಿದ ಬಳಿಕ ರಾತ್ರಿ ರೈಲುಗಳ ಸಂಚಾರ ಆರಂಭಿಸಲಾಯಿತು. ವಿಜಯಪುರ–ಮಂಗಳೂರು ಎಕ್ಸ್‌ಪ್ರೆಸ್, ಕೆಎಸ್‌ಆರ್ ಎಸ್ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು–ಕೊಝಿಕೋಡ್ ಎಕ್ಸ್‌ಪ್ರೆಸ್ ಹಾಗೂ ಎಸ್‌ಎಂವಿಟಿ ಬೆಂಗಳೂರು–ಮುರ್ಡೇಶ್ವರ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರಾತ್ರಿ ರೈಲುಗಳ ಸೇವೆ ಪುನರಾರಂಭಗೊಂಡಿದೆ.

ಆದರೆ ರೇಕ್ ಲಭ್ಯವಿಲ್ಲದ ಕಾರಣ ಕಾರವಾರ–ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ (16596) ಸೋಮವಾರ ಸಂಚರಿಸಲಿಲ್ಲ. ಭೂಕುಸಿತದ ಮಾಹಿತಿ ದೊರೆಯುತ್ತಿದ್ದಂತೆಯೇ ಪರಿಹಾರ ರೈಲು, ಸಿಬ್ಬಂದಿ ಹಾಗೂ ಜೆಸಿಬಿ ಸೇರಿದಂತೆ ಭಾರೀ ಯಂತ್ರೋಪಕರಣಗಳನ್ನು ಸ್ಥಳಕ್ಕೆ ರವಾನಿಸಿ ಹಗಲು–ರಾತ್ರಿ ನಿರಂತರವಾಗಿ ಮಣ್ಣು ಮತ್ತು ಬಂಡೆ ತೆರವು ಕಾರ್ಯ ಕೈಗೊಳ್ಳಲಾಯಿತು. ಮರಳು ಚೀಲಗಳ ಮೂಲಕ ಇಳಿಜಾರನ್ನು ಬಲಪಡಿಸಿ ಹಳಿಯನ್ನು ಸುರಕ್ಷಿತಗೊಳಿಸಿದ ಬಳಿಕ ಸಂಚಾರಕ್ಕೆ ಅನುಮತಿ ನೀಡಲಾಯಿತು.

ಹಳಿ ತೆರವು ಕಾರ್ಯ ತಡವಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಸಂಚರಿಸಿದ ಹೆಚ್ಚಿನ ರೈಲುಗಳು ಸುಮಾರು ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬದೊಂದಿಗೆ ಸಂಚರಿಸಿದವು. ಎರಡು ದಿನಗಳ ವ್ಯತ್ಯಯದ ಬಳಿಕ ಕರಾವಳಿ–ಬೆಂಗಳೂರು ನಡುವಿನ ರೈಲು ಸಂಪರ್ಕ ಮರುಸ್ಥಾಪನೆಯಾಗಿರುವುದು ಪ್ರಯಾಣಿಕರಿಗೆ ನೆಮ್ಮದಿ ತಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular