Thursday, July 30, 2026
Homeಜಿಲ್ಲೆಮಂಗಳೂರು : ಆ. 7–8ರಂದು 16ನೇ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ; 350 ಕಂಪನಿಗಳಿಂದ...

ಮಂಗಳೂರು : ಆ. 7–8ರಂದು 16ನೇ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ; 350 ಕಂಪನಿಗಳಿಂದ 24 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ.

ಕುಂದಾಪುರ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುತ್ತಿರುವ ರಾಷ್ಟ್ರಮಟ್ಟದ ಉಚಿತ ಬೃಹತ್ ಉದ್ಯೋಗ ಮೇಳ ‘16ನೇ ಆಳ್ವಾಸ್ ಪ್ರಗತಿ–2026’ ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಸುಮಾರು 350 ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, 24,298ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿರಲಿವೆ ಎಂದು ಟ್ರಸ್ಟಿ ವಿವೇಕ ಆಳ್ವ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 326ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಿಕೊಂಡಿವೆ. ಐಟಿ, ಐಟಿಇಎಸ್, ಉತ್ಪಾದನೆ, ಆರೋಗ್ಯ, ಔಷಧ, ಬ್ಯಾಂಕಿಂಗ್, ಹಣಕಾಸು, ಮಾರಾಟ, ಚಿಲ್ಲರೆ ವ್ಯಾಪಾರ, ಆತಿಥ್ಯ, ಮಾಧ್ಯಮ, ಎಲೆಕ್ಟ್ರಾನಿಕ್ಸ್, ದೂರಸಂಪರ್ಕ ಹಾಗೂ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.

ಕಳೆದ 15 ಉದ್ಯೋಗ ಮೇಳಗಳ ಮೂಲಕ 40,848 ಅಭ್ಯರ್ಥಿಗಳು ಸ್ಥಳದಲ್ಲೇ ಉದ್ಯೋಗ ಪಡೆದಿದ್ದು, 66,432 ಮಂದಿ ಮುಂದಿನ ಹಂತದ ನೇಮಕಾತಿಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷದ ಮೇಳದಲ್ಲಿ 2,873 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ದೊರೆತರೆ, 3,734 ಮಂದಿ ಶಾರ್ಟ್‌ಲಿಸ್ಟ್ ಆಗಿದ್ದರು ಎಂದು ವಿವರಿಸಿದರು.

2026ರ ಶೈಕ್ಷಣಿಕ ವರ್ಷದಲ್ಲಿ ಅಥವಾ ಅದಕ್ಕೂ ಮೊದಲು ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ನರ್ಸಿಂಗ್, ವೈದ್ಯಕೀಯ, ಪ್ಯಾರಾ ಮೆಡಿಕಲ್, ಬಿಬಿಎ, ಎಂಬಿಎ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.

ಹೊರ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗಾಗಿ ಆಗಸ್ಟ್ 6ರಿಂದ ಉಚಿತ ವಸತಿ ವ್ಯವಸ್ಥೆ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಕಾಪು, ಬಂಟ್ವಾಳ, ಉಪ್ಪಳ, ಪುತ್ತೂರು ಹಾಗೂ ಸುಬ್ರಹ್ಮಣ್ಯದಲ್ಲಿ ವಿಶೇಷ ಓರಿಯೆಂಟೇಶನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಹೆಚ್ಚಿನ ಮಾಹಿತಿಗಾಗಿ Alvas Pragati ವೆಬ್‌ಸೈಟ್⁠ ಅಥವಾ 9611750531 / 9741440490 ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥೆ ರಂಜಿತಾ ಆಚಾರ್ಯ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular