ಮಂಗಳೂರು : ಮೀನುಗಾರಿಕೆ ಮುಗಿಸಿ ವಾಪಸ್ ಬರುತ್ತಿದ್ದ ಮೀನುಗಾರಿಕಾ ಬೋಟ್‌ವೊಂದು ಅಳಿವೆಬಾಗಿಲಿನಲ್ಲಿ ಮುಳುಗಡೆಯಾದ ಘಟನೆ ನಿನ್ನೆ ಸಂಜೆ ನಡೆದಿದೆ.
ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರ ಬೋಟ್‌ಗಳಲ್ಲಿದ್ದ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇಬ್ರಾಹಿಂ ಖಲೀಲ್ ಅವರಿಗೆ ಸೇರಿದ ‘ಅಯಾನ್’ ಹೆಸರಿನ ಪರ್ಸಿನ್ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ಅಳಿವೆಬಾಗಿಲಿನ ಮೂಲಕ ವಾಪಸ್ ಬರುತ್ತಿದ್ದ ವೇಳೆ ಬೋಟ್‌ನ ತಳಭಾಗ ಕಲ್ಲಿಗೆ ಬಡಿದಿದೆ ಎನ್ನಲಾಗಿದೆ.
ಕಲ್ಲಿಗೆ ಬಡಿದ ಪರಿಣಾಮ ಬೋಟ್‌ನ ತಳಭಾಗ ಜಖಂಗೊಂಡು ಒಳಗೆ ನೀರು ನುಗ್ಗಿದೆ. ಕೆಲವೇ ಸಮಯದಲ್ಲಿ ಬೋಟ್ ಮುಳುಗುವ ಸ್ಥಿತಿಗೆ ತಲುಪಿದ್ದು, ಅದರಲ್ಲಿದ್ದ ಆರು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು.
ಈ ವೇಳೆ ಸ್ಥಳದಲ್ಲಿದ್ದ ಇತರ ಮೀನುಗಾರಿಕಾ ಬೋಟ್‌ಗಳ ಮೀನುಗಾರರು ತಕ್ಷಣ ಕಾರ್ಯಪ್ರವೃತ್ತರಾಗಿ ಆರು ಮಂದಿಯನ್ನೂ ರಕ್ಷಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಳಿವೆಬಾಗಿಲಿನಲ್ಲೇ ಬೋಟ್ ಮುಳುಗಡೆಯಾಗಿದ್ದು, ಘಟನೆಯಿಂದ ಬೋಟ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

