ಮಂಗಳೂರು : ಅರಿಫ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಪೊಲೀಸರು ಈವರೆಗೆ ಏಳು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ನಡೆದ ವಿಚಾರಣೆಯಲ್ಲಿ ಪ್ರಕರಣದ ಹಿಂದೆ ಇರುವ ಸಂಚು ಮತ್ತು ಬೆಂಬಲ ಜಾಲದ ಬಗ್ಗೆ ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಘಟನೆಯ ದಿನ, ಮುಖ್ಯ ಆರೋಪಿಗಳಾದ ರಿಫತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ ಮತ್ತು ರಿಜ್ವಾನ್ ಅವರು ಮೃತ ಅರಿಫ್ ಅವರ ಬೈಕ್ ಅನ್ನು ಹಿಂಬಾಲಿಸಿ, ಇನ್ನೋವಾ ಕಾರಿನಿಂದ ಹಿಂಬದಿಯಿಂದ ಡಿಕ್ಕಿ ಹೊಡೆದು ಬಳಿಕ ಪ್ರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ತನಿಖೆಯಲ್ಲಿ ಈ ಕೃತ್ಯವು ಪೂರ್ವಯೋಜಿತವಾಗಿದ್ದು, ಹಲವು ಆರೋಪಿಗಳು ವಿಭಿನ್ನ ರೀತಿಯಲ್ಲಿ ಸಹಕರಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಾದ ಆರು ಮಂದಿ ನೇರವಾಗಿ ದಾಳಿ ನಡೆಸಿದರೆ, ಇರ್ಷಾದ್ ಆರೋಪಿಗಳಿಗೆ ವಾಸ್ತವ್ಯ ಒದಗಿಸಿ ಘಟನೆ ಸ್ಥಳಕ್ಕೆ ಕರೆದೊಯ್ದಿದ್ದಾನೆ.
ಇನ್ನೂ ಸುಹೈಲ್ ದಾಳಿಯಲ್ಲಿ ಬಳಸಿದ ಭಾಡಿಗೆ ಕಾರನ್ನು ವ್ಯವಸ್ಥೆ ಮಾಡಿ ನಂತರ ವಿದೇಶಕ್ಕೆ ಪರಾರಿಯಾಗಿರುವುದು ತಿಳಿದುಬಂದಿದೆ. ಅರ್ಶಾದ್ ಆಯುಧ ಒದಗಿಸುವುದರ ಜೊತೆಗೆ ಪೊಲೀಸರ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದನು.
ಹಿಂದಿನ ಪ್ರಕರಣದ ಸಹಆರೋಪಿ ಅಶ್ವಿರ್ ಡಿಜಿಟಲ್ ತಂತ್ರಜ್ಞಾನ ಬಳಸಿ ಪೊಲೀಸರ ನಿಗಾವನ್ನು ತಪ್ಪಿಸಲು ನೆರವಾಗಿದ್ದಾನೆ. ದುಬೈ ಮೂಲದ OTPಗಳ ಮೂಲಕ ವಾಟ್ಸಪ್ ಖಾತೆಗಳನ್ನು ಬಳಸಲು ಸಹಾಯ ಮಾಡಿದ್ದಾನೆ.
ವಿದೇಶದಲ್ಲಿರುವ ಮುಸ್ತಫಾ ಮತ್ತು ಅಶ್ವಿರ್ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಪ್ರಸ್ತುತ, ಆರು ಪ್ರಮುಖ ಆರೋಪಿಗಳು ಹಾಗೂ ಇರ್ಷಾದ್ ಸೇರಿ ಒಟ್ಟು ಏಳು ಮಂದಿ ಬಂಧಿತರಾಗಿದ್ದು, ಉಳಿದ ಆರೋಪಿಗಳ ಪತ್ತೆ ಮತ್ತು ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕೆಲವು ಪ್ರಮುಖ ಮಾಹಿತಿಗಳನ್ನು ತನಿಖಾ ಹಿತದೃಷ್ಟಿಯಿಂದ ಈ ಹಂತದಲ್ಲಿ ಬಹಿರಂಗಪಡಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


